ಜಾನಪದ ವಿವಿಯಲ್ಲಿ ನೇಮಕಾತಿ ಅಕ್ರಮ

Basavraj Gobbi
Published on

ಹಾವೇರಿ: ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾನಪದ ವಿಶ್ವವಿದ್ಯಾಲಯದ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ನೇಮಕಾತಿ ಕುರಿತು ದಾಖಲೆಗಳೊಂದಿಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಅಲ್ಲದೆ, ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಅವಕಾಶ ವಂಚಿತ ಅಭ್ಯರ್ಥಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇದನ್ನು ಪ್ರಶ್ನಿಸಿದ ನಮ್ಮ ಮೇಲೆಯೇ ವಿದ್ಯಾಲಯದ ಕೆಲವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿಸಿದರು.

ಜಾನಪದ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆ ಮುಂದುವರಿಸಲು ಸರ್ಕಾರ 2023 ಏಪ್ರಿಲ್ 27ರಂದು ಅನುಮತಿ ನೀಡಿತ್ತು. ಯುಜಿಸಿ ನಿಯಮಾವಳಿ ಹಾಗೂ ಸರ್ಕಾರದ ಸುತ್ತೋಲೆಯಂತೆ ನೇಮಕಾತಿ ಪ್ರತಿಕ್ರಿಯೆ ನಡೆಸಲು ಸೂಚಿಸಲಾಗಿತ್ತು. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು 2023ರ ಏಪ್ರಿಲ್ 20ರಂದೇ ನೇಮಕಾತಿಯ ಪರೀಕ್ಷೆಯ ಪಠ್ಯಕ್ರಮ ಪ್ರಕಟಿಸಿದ್ದಾರೆ. ಸರ್ಕಾರ ನೇಮಕಾತಿಗೆ ಅನುಮತಿ ನೀಡುವ ಮೊದಲೇ ಪಠ್ಯಕ್ರಮ ಪ್ರಕಟಿಸಿರುವುದರ ಹಿಂದೆ ಅನುಮಾನ ಹುಟ್ಟಿಕೊಂಡಿವೆ ಎಂದರು.

ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ ಕುರಿತು ಸರ್ಕಾರದ ಗಮನಕ್ಕೆ ತಂದಾಗ ನೇಮಕಾತಿ ಸಂಬಂಧ ನೀಡಿದ ನಿರ್ದೇಶನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ದೂರುಗಳ ಕುರಿತು ವಿಸ್ತ್ರತವಾದ ವರದಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ಕಳೆದ ಮೇ 26ರಂದು ಸೂಚಿಸಿತ್ತು. ಆದರೆ, ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸದೆ ಮೇ 29ರಂದು ಸಿಂಡಿಕೇಟ್ ಸಭೆ ನಡೆಸಲಾಗಿದೆ. ಈ ಸಭೆಗೆ ಸರ್ಕಾರದ ಸಂಬಂಧಿತ ಅಧಿಕಾರಿಗಳು ಪಾಲ್ಗೊಳ್ಳದಿದ್ದರೂ ಅವರ ಪರವಾಗಿ ಬೇರೆಯವರು ಸಹಿ ಮಾಡಿದ್ದಾರೆ. ಸಿಂಡಿಕೇಟ್ ಸಭೆಯ ದಿನವೇ ಅಭ್ಯರ್ಥಿಗಳ ಸಂದರ್ಶನ ನಡೆಸಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಹೀಗೆ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಮಾಡಿಕೊಂಡಿರುವುದರ ಹಿಂದೆ ಅಕ್ರಮದ ಶಂಕೆ ಇದೆ ಎಂದು ಆರೋಪಿಸಿದರು.

ವಕೀಲ ಬಸವರಾಜ ಜೇಕಿನಕಟ್ಟಿ ಮಾತನಾಡಿ, ಪರೀಕ್ಷಾ ಪ್ರವೇಶ ಪತ್ರಗಳನ್ನು ಸರಿಯಾಗಿ ಮುಟ್ಟಿಸಿಲ್ಲ, ಕೆಲ ಪ್ರವೇಶ ಪತ್ರಗಳ ಮೇಲೆ ಅಭ್ಯರ್ಥಿಗಳ ಭಾವಚಿತ್ರ ಇಲ್ಲ, ಕೆಲವರ ಭಾವಚಿತ್ರ ಇದ್ದರೂ ಅಧಿಕಾರಿಗಳ ಸಹಿ ಇಲ್ಲ, ಒಂದೇ ಪಠ್ಯಕ್ರಮದಲ್ಲಿ 3 ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದೆ. ವಿವಿಯ ಅಧಿಕಾರಿಗಳು ತಮ್ಮ ಸಂಬಂಧಿಕರಿಂದಲೇ ಲಕ್ಷಾಂತರ ರೂಪಾಯಿ ಪಡೆದು ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೂಡಲೇ ರಾಜ್ಯಪಾಲರು ತನಿಖೆ ನಡೆಸಿ ನೇಮಕಾತಿಯನ್ನು ಅಸಿಂಧುಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ರುದ್ರಗೌಡ ಪೊಲೀಸ್‌ಗೌಡ್ರ, ಶಿವಪ್ಪ ಅಳವಂಡಿ, ಮಂಜುನಾಥ ಹಾವೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net