ಹಾಸ್ಟೆಲ್‌ಗೆ ಮಳೆಕೊಯ್ಲಿನಲ್ಲಿ ಅಕ್ರಮ *ತನಿಖೆ ನಡೆಸಲು ತೀರ್ಮಾನ *ಕೆಲಸ ಮಾಡದಿದ್ದರೂ ಬಿಲ್ ಪಾವತಿ

13-klr-4
Published on

ಕೋಲಾರ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ 69 ಹಾಸ್ಟೆಲ್‌ಗಳಿಗೆ 2.50 ಕೋಟಿ ರೂ. ವೆಚ್ಚದಲ್ಲಿ ಮಳೆಕೊಯ್ಲು ಅಳವಡಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ತನಿಖೆ ನಡೆಸಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ.

ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಬಿ.ವಿ. ಮಹೇಶ್ ವಿಷಯ ಪ್ರಸ್ತಾಪಿಸಿ, ಹಾಸ್ಟೆಲ್‌ಗಳಲ್ಲಿ ಮಳೆನೀರು ಕೊಯ್ಲು ಅಳವಡಿಕೆಯಲ್ಲಿ ಅಕ್ರಮದ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆಯಾಗಿ ಪರಿಶೀಲನೆಗೆ ತಂಡ ರಚಿಸಲಾಗಿತ್ತಾದರೂ ತನಿಖೆ ನಡೆದಿಲ್ಲ. ಒಂದೂವರೆ ವರ್ಷದ ಹಿಂದೆ ನಡೆದ ಕಾಮಗಾರಿಯಲ್ಲಿ ಕೆಲವೆಡೆ ಕೆಲಸ ಮಾಡದಿದ್ದರೂ ಬಿಲ್ ಪಾವತಿಸಲಾಗಿದೆ ಎಂದು ಆಪಾದಿಸಿದರು.

ಸದಸ್ಯ ಎಚ್.ವಿ.ಶ್ರೀನಿವಾಸ್ ಮಾತನಾಡಿ, ಮಳೆಕೊಯ್ಲು ಅಳವಡಿಕೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ವರ್ಷದ ಹಿಂದೆ ತಾವೇ ಇಲಾಖೆ ಆಯುಕ್ತರಿಗೆ ದಾಖಲೆ ಸಹಿತ ಮಾಹಿತಿ ನೀಡಿದರೂ ಕ್ರಮ ವಹಿಸಿಲ್ಲ ಎಂದು ಆಪಾದಿಸಿದರೆ, ಪ್ರತಿ ಕಚೇರಿಯಲ್ಲೂ ಹೆಗ್ಗಣ ಸೇರಿಕೊಂಡಿವೆ. ಬಡ ಮಕ್ಕಳ ಹಾಸ್ಟೆಲ್‌ಗೂ ಹೋಗಿ ತಿಂದಿದ್ದಾರೆ. ಕೂಡಲೆ ತನಿಖೆ ನಡೆಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸದಸ್ಯ ಗೋವಿಂದಸ್ವಾಮಿ ಆಗ್ರಹಿಸಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಅಕ್ರಮ ನಡೆದಿರುವ ಬಗ್ಗೆ ಗಮನಕ್ಕೆ ಬಂದ ಕೂಡಲೇ ಅಧಿಕಾರಿಯನ್ನು ವರ್ಗ ಮಾಡಲಾಯಿತು. ಅಕ್ರಮದ ಬಗ್ಗೆ ತನಿಖೆ ನಡೆಸುವಲ್ಲಿ ಜಿಪಂ ಸದಸ್ಯರ ನಿರ್ಲಕ್ಷ್ಯವಿದೆ, ಇನ್ನಾದರು ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ದ ಪ್ರಕರಣ ದಾಖಲಿಸೋಣ ಎಂದು ಸಲಹೆ ನೀಡಿದರು.

ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಬಾಲಾಜಿ ಮಾತನಾಡಿ, ಜಿಲ್ಲೆ 69 ಹಾಸ್ಟೆಲ್‌ಗಳಿಗೆ 3.50 ಲಕ್ಷ ರೂ. ವೆಚ್ಚದಲ್ಲಿ ಆರ್‌ಒ ಘಟಕ, 4.50 ಲಕ್ಷದಲ್ಲಿ ಮಳೆಕೊಯ್ಲು ಅಳವಡಿಸಲು ಇಲಾಖೆ ಕೇಂದ್ರ ಕಚೇರಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರಕ್ಕೆ ಟೆಂಡರ್ ನೀಡಿದ್ದರು. ಕೆಲಸ ಅಪೂರ್ಣವಾಗಿದ್ದರೂ ಹಿಂದಿನ ಜಂಟಿ ನಿರ್ದೇಶಕಿ ಸಿಂಧು ಕೆಲಸ ಪೂರ್ಣಗೊಂಡಿರುವ ಬಗ್ಗೆ ವರದಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬಹುದು ಎಂದಾಗ ಸಭೆ ಸರ್ವಾನುಮತದಿಂದ ಸಮ್ಮತಿಸಿತು.

ಕೆಆರ್‌ಐಡಿಎಲ್ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್, ತಾಪಂ ಅಧ್ಯಕ್ಷ ಆಂಜನಪ್ಪ ದೂರಿದಾಗ ಸಾಮಾನ್ಯ ಸಭೆ, ಸ್ಥಾಯಿ ಸಮಿತಿ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು, ಯಾವುದೇ ದೂರು ಬರಬಾರದೆಂದು ಪ್ರಭಾರ ಸಿಇಒ ಸತ್ಯಭಾಮ ಅಧಿಕಾರಿಗೆ ಸೂಚಿಸಿದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಹುತಾತ್ಮರಾದ ಜಿಲ್ಲೆಯ ವೀರಯೋಧರಿಗೆ ಸರ್ಕಾರದಿಂದ ಜಮೀನು ನೀಡುವ ಸಂಬಂಧ ಬಾಕಿ ಇರುವ ಅರ್ಜಿ ವಿಲೇವಾರಿ ಮಾಡಬೇಕು ಎಂದರು.

ಶಾಸಕ ಕೆ. ಶ್ರೀನಿವಾಸಗೌಡ, ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಿನ್ನಸ್ವಾಮಿ, ಅರುಣ್ ಪ್ರಸಾದ್, ನಿರ್ಮಲಾ ಅಂಬರೀಷ್, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಇತರರಿದ್ದರು.

ಅಧಿಕಾರಿ ತರಾಟೆಗೆ: ಕೆಆರ್‌ಐಡಿಎಲ್‌ನಿಂದ ಶಿಳ್ಳಂಗೆರೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಒಂದು ಕಾಲು ಮೀಟರ್ ರಸ್ತೆ ಅಭಿವೃದ್ಧಿ ಕಳಪೆ ಕಾಮಗಾರಿ ಬಗ್ಗೆ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಕೆರ್‌ಐಡಿಎಲ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಮಳೆ ನೀರು ಚರಂಡಿ ನಿರ್ಮಿಸದೆ ಕೆರೆಗೆ ಹರಿಯುಬೇಕಾದ ನೀರು ರಸ್ತೆಯಲ್ಲೇ ಹರಿದು ಅಕ್ಕಪಕ್ಕ ಬೆಳೆ ನಷ್ಟವಾಗಿದೆ. ಈ ಬಗ್ಗೆ ಕ್ರಮಕ್ಕೆ ಸೂಚನೆ ನೀಡಿದ್ದರೂ ಕ್ರಮ ವಹಿಸಿಲ್ಲ. ರೈತರಿಗೆ ನಿವೃತ್ತಿ ಹಣದಿಂದಲಾದರೂ ಪರಿಹಾರ ಕೊಡಬೇಕು ಎಂದು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net