ಅಕ್ರಮ ದಂಧೆಗಳ ಕಡಿವಾಣಕ್ಕೆ ಇಚ್ಛಾಶಕ್ತಿ ಅಗತ್ಯ

09-DVD-1
Published on

ದೇವದುರ್ಗ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಶೀಘ್ರ ಕಡಿವಾಣ ಹಾಕಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಸಿಪಿಐ ಸುಭಾಷ್‌ಚಂದ್ರ ಹೇಳಿದರು.

ಜಾಲಹಳ್ಳಿ ಗ್ರಾಮದ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಕುರಿತ ಅರಿವು ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಸಮಾಜದಲ್ಲಿ ದಿನೇದಿನೆ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಕಡಿವಾಣ ಹಾಕಬೇಕಾಗಿದೆ. ಮರಳು ದಂಧೆ, ಮಟ್ಕಾ, ಜೂಜು, ಕಳಪೆ ಬಿತ್ತನೆ ಬೀಜ ಮಾರಾಟದಂತಹ ದಂಧೆಗಳು ನಿರಂತರವಾಗಿ ನಡೆಯುತ್ತಿರುವುದು ಇಲಾಖೆಯ ಗಮನಕ್ಕಿದೆ ಎಂದರು.

ಲೋಕಸಭಾ ಚುನಾವಣೆ ಕಾರ್ಯದಿಂದಾಗಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಶೇ.95 ಅಕ್ರಮ ಚಟುವಟಿಕೆಗಳಿಗೆ ಶೀಘ್ರ ಕಡಿವಾಣ ಹಾಕಬಹುದು. ಅ ನಿಟ್ಟಿನಲ್ಲಿ ನಮ್ಮ ಇಲಾಖೆ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ರೈತರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿದಾಗ ತಪ್ಪದೆ ಬಿಲ್ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜಮೀನಿನ ದಾಖಲೆಗಳನ್ನು ಬೇರೆಯವರಿಗೆ ನೀಡಬಾರದು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅವ್ಯವಹಾರ ನಡೆದ ಬಗ್ಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ರೈತರು ಎಚ್ಚರಿಕೆ ವಹಿಸಬೇಕು ಎಂದರು.

ಪಟ್ಟಣದಲ್ಲಿ ವೃತ್ತಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ದುರಸ್ತಿಗೊಳಿಸಬೇಕು. ಇದರಿಂದ ಅಕ್ರಮ ಚಟುವಟಿಕೆಗಳು ಹಾಗೂ ಅಪಾರಾಧ ಕೃತ್ಯಗಳನ್ನು ತಡೆಯಬಹುದು ಎಂದರು ಸಾರ್ವಜನಿಕರು ತಿಳಿಸಿದರು. ಪಿಎಸ್‌ಐ ಬಸವರಾಜ ನಾಯಕ, ಗ್ರಾ.ಪಂ. ಸದಸ್ಯರಾದ ಚನ್ನಪ್ಪ ಅಂದೇಲಿ, ಬಸವರಾಜ ಗೋಪಾಳಪುರ, ಮಲ್ಲಪ್ಪ ಸೌದ್ರಿ, ರಂಗನಾಥ ಕುದರಿ, ತಿಮ್ಮಣ್ಣ ನಾಯಕ, ಸಲಬಣ್ಣ ಹಂಪರಗುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net