

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿಯು (ಕೆಐಎಡಿಬಿ) ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಜಮೀನಿನಲ್ಲಿ ಹೆಚ್ಚಿನ ಪರಿಹಾರ ಪಡೆಯಲು ಗಿಡಮರ ನೆಟ್ಟಿರುವ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.
ನೆಲಮಂಗಲ ತಾಲೂಕು ಹನುಮಂತಪುರ, ಬಿದ್ಲೂರು, ಕೋಡಿಪಾಳ್ಯ ವ್ಯಾಪ್ತಿಯಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನಿನಲ್ಲಿ ಅಕ್ರಮವಾಗಿ ಗಿಡ ಮರ ನೆಟ್ಟಿರುವ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡುವಂತೆ ಸಂಸ್ಥೆಯ ಸಿಇಒ ಡಾ.ಎಂ.ಮಹೇಶ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ನಿಯಮಗಳ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗ ಜಮೀನುಗಳಲ್ಲಿ ಇರುವ ಗಿಡಮರಗಳು ಮತ್ತು ಕಟ್ಟಡಗಳಿಗೆ ಮಾತ್ರ ಪರಿಹಾರ ಕೊಡಲಾಗುವುದು. ಆದರೆ ಕೆಲವೆಡೆಗಳಲ್ಲಿ ವಿಪರೀತ ಪರಿಹಾರ ದಕ್ಕಿಸಿಕೊಳ್ಳಲೆಂದೇ ಕೆಲವರು ಅಧಿಸೂಚಿತ ಜಮೀನುಗಳಲ್ಲಿ ಬೇರೆಡೆ ಬೆಳೆದು ನಿಂತಿರುವ ಬಲಿತ ಗಿಡಮರಗಳನ್ನು ತಂದು ನೆಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಕಾರಣಕ್ಕೆ ಈ ಆದೇಶ ಮಾಡಲಾಗಿದೆ. ತನಿಖಾ ತಂಡದಲ್ಲಿ ಕೆಐಎಡಿಬಿ ಮುಖ್ಯ ಎಂಜಿನಿಯರ್ ಕೂಡ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಅಥವಾ ಇಸ್ರೋದ ಸ್ಯಾಟಲೈಟ್ ಮ್ಯಾಪಿಂಗ್ ಆಧರಿಸಿಯೇ ಅಧಿಸೂಚಿತ ಜಮೀನುಗಳಿಗೆ ಪರಿಹಾರ ವಿತರಿಸುವುದನ್ನು ಕಡ್ಡಾಯಗೊಳಿಸಲಾಗುವುದು.
ಅಧಿಸೂಚನೆ ಹೊರಡಿಸಿದ ನಂತರ ಹೆಚ್ವಿನ ಪರಿಹಾರಕ್ಕಾಗಿ ಗಿಡ/ಮರ ತಂದು ನೆಡುವುದರ ಮೂಲಕ ಸಂಸ್ಥೆಗೆ ನಷ್ಟ ಉಂಟು ಮಾಡಿದರೆ ಅದಕ್ಕೆ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹಾಗೆಯೇ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮಹೇಶ ಎಚ್ಚರಿಸಿದ್ದಾರೆ.