

ಗೌರಿಬಿದನೂರು: ತಾಲೂಕಿನ ಆರ್ಕುಂದ ಗ್ರಾಮದ ಬಳಿಯ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಇತ್ತೀಚೆಗೆ ಭಾರಿ ಸುದ್ದಿಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸದ ಕಾರಣ ಗಣಿಗಾರಿಕೆ ಮುಂದುವರಿದಿದೆ.
ಗಣಿ ನಿಯಮಗಳನ್ನು ಉಲ್ಲಂಸಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಆರ್ಕುಂದ, ಅರಸಲ್ ಬಂಡೆ, ಕದಿರಿದೇವರಹಳ್ಳಿ, ಕಾಟನಾಗೇನಹಳ್ಳಿಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಮನೆಗಳು ಬಿರುಕು ಬಿಡುತ್ತಿದ್ದು, ಭಾರಿ ಸ್ಫೋಟಕ್ಕೆ ಚಿಮ್ಮುವ ಕಲ್ಲುಗಳು ಸುತ್ತ ಮುತ್ತಲಿನ ರೈತರ ಜಮೀನುಗಳಲ್ಲಿ ಬೀಳುತ್ತಿವೆ. ಇನ್ನೊಂದೆಡೆ ಯಾವಾಗ ಬೇಕೆಂದಾಗ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಜನರಿಗೆ ನಿದ್ದೆ ಇಲ್ಲದಂತಾಗಿದೆ.
ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ: ಬೆಸ್ಕಾಂ ವಿದ್ಯುತ್ ತಂತಿಗಳು ಸಾಗಿರುವ ಮಾರ್ಗಮಧ್ಯದಲ್ಲಿಯೇ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಗಣಿಗಾರಿಕೆ ಪ್ರದೇಶದಿಂದ ಕೇವಲ 150 ಮೀ. ದೂರದಲ್ಲಿ ಸರ್ವೇ ನಂ.55ರಲ್ಲಿ 50 ಎಕರೆ ಅರಣ್ಯ ಪ್ರದೇಶವಿದೆ. ಗಣಿಗಾರಿಕೆಯ ಶಬ್ದದಿಂದ ಪ್ರಾಣಿ ಪಕ್ಷಿ ಸಂಕುಲಕ್ಕೂ ಅಪಾಯ ಉಂಟಾಗುತ್ತಿದೆ. ಆದರೆ ಅಧಿಕಾರಿಗಳು ಇದನ್ನು ಗಣನೆಗೆ ತೆಗೆದುಕೊಳ್ಳದೆ ಗಣಿಗಾರಿಕೆಗೆ ಅನುಮತಿ ನೀಡಿರುವುದು ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಮರೆಮಾಚುವ ಯತ್ನ: ಗಣಿಗಾರಿಕೆ ವ್ಯಾಪ್ತಿಯಲ್ಲಿ ಮರಗಮ್ಮ ದೇವಾಲಯವೊಂದು ಬಿರುಕು ಬಿಟ್ಟಿದ್ದರಿಂದ ಹೊಸ ದೇವಾಲಯ ನಿರ್ಮಿಸಿಕೊಡುವ ಮೂಲಕ ಅಕ್ರಮ ಮರೆಮಾಚುವ ಪ್ರಯತ್ನ ಮಾಡಲಾಗಿದೆ. ಆದರೆ ಜನರ ಮನೆಗಳು ಬಿರುಕು ಬಿಟ್ಟು, ಬದುಕು ಅತಂತ್ರ ಸ್ಥಿತಿಗೆ ತಲುಪುತ್ತಿದ್ದರೂ ಅವರ ಗೋಳನ್ನು ಕೇಳುವವರಿಲ್ಲದಂತಾಗಿದೆ.
ಪುರಕ್ಕೂ ಗಂಡಾಂತರ: ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಕುಂದದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕೇವಲ 1 ಕಿ.ಮೀ ದೂರದ ಪುರ ಗ್ರಾಮಕ್ಕೂ ಗಂಡಾಂತರ ತಂದೊಡ್ಡುತ್ತಿದೆ. ಇತ್ತೀಚೆಗೆ ಇಲ್ಲಿನ ಮನೆಗಳು ಬಿರುಕು ಬಿಡುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ. ಆದರೆ ಗ್ರಾಪಂ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಣಿಗಾರಿಕೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸ್ಥಗಿತಗೊಳಿಸಲು ಆಗ್ರಹ: ಅವೈಜ್ಞಾನಿಕ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ಇಲ್ಲವೇ ಶಾಮಿಲಾಗಿ ಗಣಿಗಾರಿಕೆಯವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿರುವ ಸ್ಥಳೀಯರು, ಗಣಿಗಾರಿಕೆ ನಡೆಸಿ ಸಂಪತ್ತು ಖಾಲಿ ಮಾಡಿದ್ದು ಸಾಕು. ಇಲ್ಲಿ ಸ್ಥಗಿತಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಮಲೆನಾಡಿನ ಸೌಂದರ್ಯ ಮಾಯ: ಮಂಚೇನಹಳ್ಳಿ ಪ್ರದೇಶ ಮೊದಲಿನಿಂದಲೂ ಬರದ ಜಿಲ್ಲೆಯ ಮಲೆನಾಡು ಎಂಬ ಹೆಸರು ಸಂಪಾದಿಸಿದೆ. ಆದರೆ ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮಲೆನಾಡಿನ ಸೌಂದರ್ಯಕ್ಕೆ ಕುತ್ತು ತಂದಿದೆ. ಸ್ಥಳೀಯರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ವ್ಯಾಪಕ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ತಾಲೂಕು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ.
ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಸಲ್ಲಿಸಿದ ದೂರನ್ನು ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತರಲಾಗಿದೆ. ಅವರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಿದ್ದಾರೆ. ಮೀನಾಕ್ಷಿ, ಪಿಡಿಒ, ಪುರ
ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಅರಣ್ಯ, ಬೆಸ್ಕಾಂ ಸೇರಿ ಎಲ್ಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಗಣಿಗಾರಿಕೆಯಿಂದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆ ಆಲಿಸಬೇಕು. ಯಾವುದೇ ಕಾರಣಕ್ಕೂ ಗಣಿಗಾರಿಕೆ ಮುಂದುವರಿಸಲು ಅವಕಾಶ ನೀಡಬಾರದು.ರವಿಕುಮಾರ್, ಸ್ಥಳೀಯ ನಿವಾಸಿ