

ಬೆಳಗಾವಿ: ತಾಲೂಕಿನ ಅರಳಿಕಟ್ಟಿ, ಮರಕಟ್ಟಿ ಗ್ರಾಪಂ ವ್ಯಾಪ್ತಿಯ ಗಣಿಕೊಪ್ಪ ಚಂದನ ಹೊಸೂರು, ಬಸಾಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಈ ಸಮಸ್ಯೆ ನಿವಾರಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಸ್ಟೋನ್ ಕ್ರಶರ್‌ಗಳಿಂದ ಗ್ರಾಮದಲ್ಲಿ ತೊಂದರೆಯಾಗುತ್ತಿದ್ದು, ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೆಲವು ಕ್ರಶರ್ ಮಾಲೀಕರು ಅಕ್ರಮ ಗಣಿಗಾರಿಕೆ ಮಾಡಿ, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಕೃಷಿಭೂಮಿಯನ್ನು ಈ ವ್ಯಕ್ತಿಗಳು ಖರೀದಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಟೋನ್ ಕಶರ್ ಸುತ್ತಲಿನ ಪ್ರದೇಶದ ಕೃಷಿ ಜಮೀನುಗಳು ಧೂಳುಮಯವಾಗಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿವೆ. ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ಕ್ರಶರ್‌ಗಳಲ್ಲಿ ಬಳಸುವ ಸ್ಫೋಟಕಗಳಿಂದ ಮನೆ, ಶಾಲೆ, ದೇವಸ್ಥಾನಗಳ ಕಟ್ಟಡ ಬಿರುಕು ಬಿಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಅಕ್ರಮ ಗಣಿಗಾರಿಕೆಗೆ ತಡೆದು, ಗ್ರಾಮಗಳಲ್ಲಿ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದರು.
ಮಹಾಂತೇಶ ಉಳ್ಳಾಗಡ್ಡಿ, ರವಿ ಬಾಗೇವಾಡಿ, ನಾಗಪ್ಪ ಬಾಗೇವಾಡಿ, ಪ್ರಕಾಶ ಪೂಜಾರಿ, ಶಿವಾನಂದ ಅಲವಾರಿ, ವಿನೋದ ಶಿವರುದ್ರನ್ನವರ, ಶಂಕ್ರಯ್ಯ ಹಾರೋಗೊಪ್ಪ, ಶಿವಾನಂದ ಉಳ್ಳಾಗಡ್ಡಿ, ಸೋಮಯ್ಯ ಜಂಬಗಿ, ಅಡಿವೆಪ್ಪ ಹುಲಮನಿ, ಈರಯ್ಯ ಹಾರಗೊಪ್ಪ, ಚಂಬಣ್ಣ ಉಳ್ಳಾಗಡ್ಡಿ ಇತರರಿದ್ದರು.