

ಗಂಗಾವತಿ: ನಗರದ ವಿರುಪಾಪುರ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮರಮ್ ಅಕ್ರಮ ಗಣಿಗಾರಿಕೆ ನಿಯಂತ್ರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ತಹಸಿಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ಕಂದಾಯ ಇಲಾಖೆ ಕಚೇರಿಗೆ ಹೊಂದಿಕೊಂಡ ಸ.ನಂ.53ರಲ್ಲಿ ಮರಮ್ ಗಣಿಗಾರಿಕೆ ನಡೆಯುತ್ತಿದ್ದು, ಅಪಾರ ಪ್ರಮಾಣದ ಮರಮ್ ಖಾಸಗಿ ಪಾಲಾಗಿದೆ. ಉದ್ದೇಶಿತ ಜಾಗದಲ್ಲಿ ನಗರಕ್ಕೆ ಪೂರೈಕೆಯಾಗುವ ಶುದ್ಧ ಕುಡಿವ ನೀರಿನ ಘಟಕದ ಮೇಲೆತ್ತರದ ನೀರು ಸಂಗ್ರಹ ತೊಟ್ಟಿಯಿದ್ದು, ಮರಮ್ ಅಗೆದ ಕಾರಣ ತೊಟ್ಟಿಗೆ ಅಪಾಯ ಎದುರಾಗಿದೆ.
ಈ ಬಗ್ಗೆ ತಹಸೀಲ್ದಾರ್, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನಗರಸಭೆ ಆಡಳಿತ ಮಂಡಳಿ ಆಕ್ಷೇಪಿಸಿದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಂಕರ ಪೂಜಾರಿ, ಮುತ್ತಣ್ಣ ಈಳಿಗೇರ್, ಉಮೇಶ ಬಂಡಿ, ಬಸವರಾಜನಾಯಕ, ರಮೇಶಭೋವಿ, ನಾಗರಾಜ್ ನಾಯಕ, ವೆಂಕಟೇಶ, ಮುತ್ತಣ್ಣ ಆಡಿನ್ ಇತರರಿದ್ದರು.