

ಶಿವಮೊಗ್ಗ: ಪಾಲಿಕೆ ಸದಸ್ಯರ ಚಿಕಿತ್ಸಾ ವೆಚ್ಚ ಭರಿಸಲು ಅವಕಾಶ ಇಲ್ಲದಿದ್ದರೂ ಈ ಹಿಂದೆ ಏಳು ಸದಸ್ಯರು ಚಿಕಿತ್ಸಾ ವೆಚ್ಚವನ್ನು ಪಡೆದುಕೊಂಡಿದ್ದಾರೆ. ಇವರೆಲ್ಲರಿಗೆ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಮನೋಹರ ಗೌಡ ಒತ್ತಾಯಿಸಿದರು.
ನಗರಪಾಲಿಕೆ ಸದಸ್ಯರಾಗಿದ್ದ ಕೆ.ಶಂಕರ ಗನ್ನಿ, ಎನ್.ಎಸ್.ಮಂಜುನಾಥ್, ಆರ್.ಸಿ.ನಾಯ್ಕ, ಪಿ.ಪ್ರಭಾಕರ, ಶಾಮೀರ್ ಖಾನ್, ಎಸ್.ಜಿ.ರಾಜು, ಮಂಜುಳಾ ಶಿವಣ್ಣ ನಿಯಮಾವಳಿ ಮೀರಿ ಚಿಕಿತ್ಸಾ ವೆಚ್ಚ ಪಡೆದಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಾನು ಈ ಅಂಶದ ಮೇಲೆ ಬೆಳಕು ಚೆಲ್ಲಿದ ಬಳಿಕ ಶಂಕರ ಗನ್ನಿ 87,709 ರೂ., ಎನ್.ಎಸ್. ಮಂಜುನಾಥ್ ಒಂದು ಲಕ್ಷ ರೂ., ಆರ್.ಸಿ. ನಾಯ್ಕ, 1,05,178 ರೂ., ಪ್ರಭಾಕರ 51,800 ರೂ. ಪಾಲಿಕೆಗೆ ಹಿಂದಿರುಗಿಸಿದ್ದಾರೆ. ಆದರೆ ಶಾಮೀರ್ ಖಾನ್ 49,781 ರೂ., ಎಸ್.ಜಿ.ರಾಜು 1,08,523 ರೂ., ಮಂಜುಳಾ ಶಿವಣ್ಣ 17,904 ರೂ. ಇದುವರೆಗೂ ಪಾಲಿಕೆಗೆ ಪಾವತಿಸಿಲ್ಲ ಎಂದು ದೂರಿದರು.
ಭ್ರಷ್ಟಾಚಾರದ ವಿಷಯದಲ್ಲಿ ಎಲ್ಲ ಪಕ್ಷಗಳೂ ಒಂದಾಗಿವೆ. ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ಈ ಹಿಂದೆ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವ ಪಕ್ಷದವರೂ ವಿರೋಧಿಸಿಲ್ಲ. ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಹೀಗಾಗಿ ಈ ಹಿಂದಿನ ಬಾರಿ ಪಾಲಿಕೆ ಸದಸ್ಯರಾಗಿದ್ದವರಿಗೆ ಮತ್ತೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಆಪ್ ಪ್ರಮುಖರಾದ ಕಿರಣ್, ಮಂಜುನಾಥ್, ನವಿಲೇಶ್, ಚಂದ್ರಶೇಖರ್ ಇತರರಿದ್ದರು.