ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡ ವಶ

11 CRP 02 (1)
Published on


ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ತಾಲೂಕಿನ ಹಿರೀಸಾವೆ ಹೋಬಳಿಯ ಡಿ.ತುಮಕೂರು ಗ್ರಾಮದ ಕೃಷಿ ಜಮೀನೊಂದರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಪಟ್ಟಣದ ಅಬಕಾರಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಡಿ.ತುಮಕೂರು ಗ್ರಾಮದ ನಾಗರಾಜ್(70) ಆರೋಪಿ.
ಕೃಷಿ ಜಮೀನಿನಲ್ಲಿ ರಾಗಿ ಹಾಗೂ ಜೋಳದ ಬೆಳೆಯ ಸಾಲಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಅಬಕಾರಿ ಉಪ ಆಯುಕ್ತರ ನೇತ್ರತ್ವದಲ್ಲಿ ದಿಢೀರ್ ದಾಳಿ ನಡೆಸಲಾಯಿತು.
ಕಾರ್ಯಾಚರಣೆ ನಡೆಸಿ ರಾಗಿ ಹಾಗೂ ಜೋಳದ ಸಾಲಿನಲ್ಲಿ ಅಲ್ಲಲ್ಲಿ ಬೆಳೆಯಲಾಗಿದ್ದ ಸುಮಾರು 60 ಸಾವಿರ ರೂ. ಮೌಲ್ಯದ ನಾಲ್ಕೂವರೆ ಕೆ.ಜಿ. ಗಾಂಜಾ ಗಿಡಗಳನ್ನು ಕಿತ್ತು ವಶಕ್ಕೆ ಪಡೆಯಲಾಯಿತು. ವಿಷಯ ತಿಳಿಯುತಿದ್ದಂತೆಯೇ ಜಮೀನಿನ ಮಾಲೀಕ ನಾಗರಾಜ್ ತಲೆಮರೆಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ತಾಲೂಕು ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿಯ ಸೆರೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಜಿಲ್ಲಾ ಅಬಕಾರಿ ಉಪ ಅಧೀಕ್ಷಕ ಎಂ.ಎಚ್.ರಘು, ವಲಯದ ಅಬಕಾರಿ ನಿರೀಕ್ಷಕಿ ಎಂ.ಜೆ.ಅನಿತಾ, ಅಬಕಾರಿ ಉಪ ನಿರೀಕ್ಷಕ ಎಚ್.ಎ.ಅಬ್ದುಲ್ ನಿಸಾರ್, ಸಿಬ್ಬಂದಿ ಕೆ.ವೀರಭದ್ರ, ಎನ್.ವಿ.ಕರಣಿ, ಬಿ.ಆರ್.ಶಿವಕುಮಾರ್, ಜಿ.ಎಂ.ಪ್ರದೀಪ್, ವಾಹನ ಚಾಲಕರಾದ ಶಿವಕುಮಾರ್ ಹಾಗೂ ಕೆ.ಜೆ.ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net