ಪುಷ್ಪಾ ಸಿನಿಮಾ ಮಾದರಿಯಲ್ಲಿ ಅಕ್ರಮ ಮದ್ಯ ಸಾಗಣೆ

crime
Published on

ಹುಬ್ಬಳ್ಳಿ: ತೆಲುಗಿನ ಪುಷ್ಪ ಸಿನಿಮಾದಲ್ಲಿ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಕಟ್ಟಿಗೆ ಸಾಗಿಸುತ್ತಿದ್ದ ದೃಶ್ಯ ಜನಜನಿತವಾಗಿದೆ. ಇದೇ ಮಾದರಿಯಲ್ಲಿ ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಲಾರಿ ಧಾರವಾಡದ ನರೇಂದ್ರ ಟೋಲ್ ಬಳಿ ತಗಲಾಕಿಕೊಂಡಿದೆ. ಪೊಲೀಸರು ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದ ಬೆಂಗಳೂರಿನಿಂದ ಕಣ್ತಪ್ಪಿಸಿಕೊಂಡು ಬಂದಿದ್ದ ಲಾರಿಯನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಟ್ಯಾಂಕರ್‌ನಲ್ಲಿ 18ರಿಂದ 20 ಸಾವಿರ ಲೀಟರ್ ಆಯಿಲ್ ಸಂಗ್ರಹವಿರುವುದು ಸಾಮಾನ್ಯ. ಆದರೆ, ಈ ಲಾರಿಯ ಟ್ಯಾಂಕರ್‌ನಲ್ಲಿ 3 ಸಾವಿರ ಲೀಟರ್ ಆಯಿಲ್ ಇದೆ ಎಂಬ ಬಿಲ್ ಅಧಿಕಾರಿಗಳಿಗೆ ಲಭಿಸಿತ್ತು. ಇದೇ ಅನುಮಾನದಲ್ಲಿ ಬೆನ್ನು ಬಿದ್ದ ಅಧಿಕಾರಿಗಳು ಲಾರಿಯನ್ನು ಜ. 11ರಂದು ರಾತ್ರಿ ವಶಕ್ಕೆ ಪಡೆದಿದ್ದರು. ಈ ವೇಳೆ ಲಾರಿ ಚಾಲಕ ರಾಜಸ್ತಾನ ಮೂಲದ ಮೋಹನ್‌ಲಾಲ್ ಪರಾರಿಯಾಗಿದ್ದ. ನಂತರ ಭೌತಿಕ ತಪಾಸಣೆ ನಡೆಸಿ ಟ್ಯಾಂಕರ್ ತೆರೆದು ನೋಡಿದಾಗ 50 ಲಕ್ಷ ರೂ. ಮೌಲ್ಯದ ಗೋವಾ ಬ್ರಾೃಂಡ್ ಹೆಸರಿನ ಲೇಬಲ್ ಇರುವ ಅಕ್ರಮ ಮದ್ಯ ಪತ್ತೆಯಾಗಿದೆ. ವಿಶೇಷವೆಂದರೆ ಲಾರಿಯ ನಂಬರ್ ಹಾಗೂ ಜಿಎಸ್‌ಟಿ ಬಿಲ್ ಕೂಡ ನಕಲಿಯೇ !
ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎನ್. ರವಿಕುಮಾರ ಮಾರ್ಗದರ್ಶನದಲ್ಲಿ ಉಪ ಆಯುಕ್ತ ಬಾಳಪ್ಪ ಸಂಪಗಾಂವ್, ಸಹಾಯಕ ಆಯುಕ್ತ ವಿಜಯಕುಮಾರ ಸನದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಈ ಪ್ರಕರಣವನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net