

ನರಗುಂದ: ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದು-ಕೊರತೆಗಳ ಸಭೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ತಾಲೂಕಿನಲ್ಲಿ ಎಗ್ಗಿಲ್ಲದೆ ಸಾಗಿದ ಅಕ್ರಮ ಮದ್ಯ ಮಾರಾಟದಿಂದ ಗ್ರಾಮೀಣರ ಬದುಕು ಮೂರಾಬಟ್ಟೆಯಾಗಿದೆ. ಭೈರನಹಟ್ಟಿ-ರಡ್ಡೇರನಾಗನೂರ ಮಾರ್ಗದುದ್ದಕ್ಕೂ ಅಕ್ರಮ ಮಣ್ಣು ಗಣಿಗಾರಿಕೆಯಿಂದ ದೊಡ್ಡದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಎಸ್ಸಿ,ಎಸ್ಟಿ ಕಾಲನಿಗಳಲ್ಲಿ ಚರಂಡಿಗಳು ದುರ್ನಾತ ಬೀರುತ್ತಿವೆ. ಕೆಲವೆಡೆ ವಿದ್ಯುತ್ ಟಿಸಿ, ಕಂಬಗಳನ್ನು ಸ್ಥಳಾಂತರಿಸುವಂತೆ ಕಳೆದ 6 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಕೆಇಬಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ನರಗುಂದ ಸೋಮಾಪೂರ ಹನುಮಂತದೇವರ ದೇವಸ್ಥಾನ ಬಳಿ ಹೆದ್ದಾರಿ ಇಕ್ಕಟ್ಟಾಗಿದೆ. ರಸ್ತೆ ಪಕ್ಕದ ಚರಂಡಿ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿಸಬೇಕು. ನಗರದಲ್ಲಿ ನಡೆಯುತ್ತಿರುವ ನಿರಂತರ ಕಳವು ಪ್ರಕರಣಗಳನ್ನು ತಡೆಗಟ್ಟಲು ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಎಸ್ಸಿ, ಎಸ್ಟಿ ಸಮುದಾಯದವರು ಒತ್ತಾಯಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ವಸಂತ ಜೋಗಣ್ಣವರ, ಹನುಮಂತ ರಾಮಣ್ಣವರ, ದತ್ತು ಜೋಗಣ್ಣವರ, ಡಾ. ಮುತ್ತು ಸುರಕೋಡ, ನೇತಾಜಿ ನರಗುಂದ, ಜಿ.ಬಿ. ತಳವಾರ ಮಾತನಾಡಿ, ಸೋಮಾಪೂರದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಚವಡಿ (ಕಟ್ಟಡ) ನಿರ್ಮಿಸಬೇಕು. ರಾಚಯ್ಯ ನಗರದಲ್ಲಿನ ಮಾದಾರ ಹಾಗೂ ಚಲವಾದಿ ಸಮುದಾಯ ಭವನ ದುರಸ್ತಿಪಡಿಸಬೇಕು. ಅರ್ಧಕ್ಕೆ ನಿಂತಿರುವ ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ತಹಸೀಲ್ದಾರ್, ಹೆಸ್ಕಾಂ ಇಲಾಖೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಿಕೊಡುವಂತೆ ಹೆಸ್ಕಾಂ ವಿಭಾಗೀಯ ಅಧಿಕಾರಿ ಲಿಂಗರಾಜ ಬ್ಯಾಲಹುಣಸಿ ಅವರಿಗೆ ಸೂಚಿಸಿದರು. ಪೊಲೀಸ್, ಪುರಸಭೆ, ತಾಪಂ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆಂಬುಲೆನ್ಸ್ ಸೇವೆ ಅಸಮರ್ಪಕ
ನರಗುಂದದ ಸರ್ಕಾರಿ ತಾಲೂಕು ಆಸ್ಪತ್ರೆ ರೋಗಿಗಳಿಗೆ ಸರಿಯಾಗಿ ಆಂಬುಲೆನ್ಸ್ ಸೇವೆ ಲಭ್ಯವಾಗುತ್ತಿಲ್ಲ. ಕಳೆದ ತಿಂಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತೆರಳುವಂತೆ ಹೇಳಿದ್ದರು. ಸಮಯಕ್ಕೆ ಸರಿಯಾಗಿ ತುರ್ತು ವಾಹನ ಸೌಲಭ್ಯವಿರಲಿಲ್ಲ. ಅನಿವಾರ್ಯವಾಗಿ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಳು. ಇದಕ್ಕೆ ಯಾರು ಹೊಣೆ ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ರೇಣುಕಾ ಕೊರವನ್ನವರ ಅವರನ್ನು ನಾಗರಿಕರು ಪ್ರಶ್ನಿಸಿದರು. ಗಲಿಬಿಲಿಗೊಂಡ ಅಧಿಕಾರಿ ಮಾಹಿತಿಗಾಗಿ ಕಚೇರಿಗೆ ಕರೆಮಾಡಲು ಮುಂದಾದರು. ‘ಮಹಿಳೆ ಈಗಾಗಲೇ ಸತ್ತು ಹೋಗಿದ್ದಾಳೆ. ಈಗೇನು ಮಾಡುತ್ತೀರಿ?’ ಎಂದು ಅಧಿಕಾರಿಗಳ ಕಾರ್ಯ ವೈಖರಿಯನ್ನು ನಾಗರಿಕರು ಟೀಕಿಸಿದರು.