ಅಕ್ರಮ ಮದ್ಯ ಮಾರಾಟಕ್ಕಿಲ್ಲ ಬ್ರೇಕ್

14-KGLPHOTO-4,,,,,
ಕೊಳ್ಳೇಗಾಲ ತಾಲೂಕಿನ ಜಾಗೇರಿ ಶಾಂತಿ ನಗರದಲ್ಲಿ ಮದ್ಯ ಅಕ್ರಮ ಮಾರಾಟ ಮಾಡಲು ದಂಧೆಕೋರರು ಶೇಖರಿಸಿಟ್ಟಿದ್ದ ಮದ್ಯವನ್ನು ರೈತರು ವಶಕ್ಕೆ ಪಡೆದಿರುವುದು.
Published on

ಕೊಳ್ಳೇಗಾಲ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತ್ತಿದೆ.

ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಅಡ್ಡೆಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸುತ್ತಿದೆಯಾದರೂ ಅಕ್ರಮ ಮದ್ಯ ಮಾರಾಟದ ಬೇರನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ಪ್ರಕರಣ ದಾಖಲಿಸಿಕೊಂಡ ಬಳಿಕ ದಂಡ ಕಟ್ಟಿಸಿಕೊಳ್ಳುತ್ತಿದ್ದರಾದರೂ ಅಕ್ರಮ ದಂಧೆಕೋರರು ಮಾತ್ರ ಎಚ್ಚೆತ್ತುಕೊಂಡಿಲ್ಲ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸುತ್ತಿದ್ದು, 10ರಿಂದ 20 ರೂ. ಹೆಚ್ಚಿನ ಬೆಲೆ ಮದ್ಯ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.

ಪಟ್ಟಣದ ಮುಡಿಗುಂಡ, ಹೊಸ ಹಂಪಾಪುರ, ಸತ್ತೇಗಾಲ, ತಿಮ್ಮರಾಜೀಪುರ, ಅರೇಪಾಳ್ಯ, ಜಾಗೇರಿ ಇತರ ಕಡೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಮನೆ, ತೋಟದ ಮನೆ, ಕಿರಾಣಿ ಅಂಗಡಿ, ಸಣ್ಣ ಮಾಂಸದ ಹೋಟೆಲ್‌ಗಳಲ್ಲಿ ನಿತ್ಯವೂ ಮದ್ಯ ಮಾರಾಟ ಮಾಡಲಾಗುತ್ತದೆ. ಸಮೀಪದ ವೈನ್ ಶಾಪ್‌ಗಳಿಂದಲೇ ದಂಧೆಕೋರರಿಗೆ ಸರಬರಾಜಾಗುತ್ತಿದ್ದರೂ ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.

ಇನ್ನು ಪೊಲೀಸ್ ಹಾಗೂ ಅಬಕಾರಿ ಇಲಾಖೆ ಒಂದೆರಡು ಪ್ರಕರಣ ದಾಖಲಿಸಿ ಕೈಚೆಲ್ಲಿ ಕುಳಿತಿರುವುದರಿಂದ ಮದ್ಯ ಮಾರಾಟ ಹೆಚ್ಚಾಗಿದೆ. ಸ್ಥಳೀಯವಾಗಿಯೇ ಮದ್ಯ ಸಿಗುವುದರಿಂದ ಗ್ರಾಮೀಣ ಭಾಗದ ಯುವ ಪೀಳಿಗೆ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ಮನೆಗಳಲ್ಲಿ ಕ್ಯಾತೆ ತೆಗೆಯುವುದರಿಂದ ಕೌಟುಂಬಿಕ ಕಲಹ ಹೆಚ್ಚುತ್ತಿದೆ.

ಬಯಲಿಗೆಳೆದ ರೈತ ಸಂಘ: ತಾಲೂಕಿನ ಜಾಗೇರಿಯ ಶಾಂತಿನಗರದಲ್ಲಿ ಇತ್ತೀಚೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಟೀಫನ್ ಪುರಷೋತ್ತಮ್ ಹಾಗೂ ಭಾಗ್ಯಮ್ಮ ಅವರನ್ನು ರೈತ ಸಂಘ ಮಹಿಳೆಯರು ಹಾಗೂ ಪದಾಧಿಕಾರಿಗಳು ಹಿಡಿದಿದ್ದಾರೆ. ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಮದ್ಯದ ಪೌಚ್‌ಗಳನ್ನು ವಶಕ್ಕೆ ಪಡೆದು ಬೀದಿಗೆ ಸುರಿದು ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕೆರೆಸಿ ಇಬ್ಬರನ್ನೂ ಒಪ್ಪಿಸಿದ್ದಾರೆ.

ಮುಳ್ಳೂರು ಗ್ರಾಮದ ಹಲವೆಡೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಗ್ರಾಮದಲ್ಲಿ ಪ್ರಭಾವಿಗಳು ಟಾರ್ಗೆಟ್ ಮಾಡುತ್ತಾರೆ. ದೂರು ನೀಡಿದವರಿಗೆ ಬೇರೆ ರೀತಿಯಲ್ಲಿ ತೊಂದರೆ ನೀಡುತ್ತಾರೆ. ಹೋರಾಟಗಾರರಿಗೆ ರಕ್ಷಣೆ ಇಲ್ಲ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಸರಿಯಾಗಿ ಕೆಲಸ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.
ಹೆಸರು ಹೇಳಲು ಇಚ್ಛಿಸಿದವರು

ಶಾಂತಿನಗರದಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿತ್ತು. ಹಾಗಾಗಿ ರೈತ ಸಂಘದ ಪದಾಧಿಕಾರಿಗಳು ಮದ್ಯ ಮಾರುತ್ತಿದ್ದವರನ್ನು ಹಿಡಿದು ಅಬಕಾರಿ ಇಲಾಖೆಗೆ ಕೊಟ್ಟಿದ್ದಾರೆ. ಸತ್ತೇಗಾಲ ಗ್ರಾಮದ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಬಾರ್‌ಗಳಿಂದಲೇ ನಿತ್ಯವೂ ನಮ್ಮ ಗ್ರಾಮಕ್ಕೆ ಮದ್ಯ ಪೌಚ್ ಸರಬರಾಜು ಆಗುತ್ತಿದ್ದರೂ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ.
ಗುಣ ಶಾಂತಿನಗರ ನಿವಾಸಿ, ಜಾಗೇರಿ

ಜಾಗೇರಿ-ಶಾಂತಿನಗರದಲ್ಲಿ ಇಬ್ಬರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ರೈತರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಮದ್ಯವನ್ನು ವಶಕ್ಕೆ ಪಡೆದಿದ್ದೇವೆ. ಇಬ್ಬರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದೀಗ ಚುನಾವಣೆ ಕೆಲಸ ಮುಗಿದಿದೆ. ಮುಂದಿನ ದಿನಗಳಲ್ಲಿ ಅಕ್ರಮ ದಂಧೆಯನ್ನು ಬಯಲಿಗೆಳೆದು ಪ್ರಕರಣ ದಾಖಲಿಸುತ್ತೇವೆ.
ಡಿ.ಸುನೀಲ್ ಕುಮಾರ್ ವೃತ್ತ ನಿರೀಕ್ಷಕ, ಅಬಕಾರಿ ಇಲಾಖೆ, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net