ಅಕ್ರಮ ಮದ್ಯ ಮಾರಾಟಕ್ಕಿಲ್ಲ ಬ್ರೇಕ್

ಮಂಡ್ಯ ಕೆ.ಆರ್.ಪೇಟೆ ತಾಲೂಕು ಮನೆ ಅಕ್ರಮ ಮದ್ಯ ಮಾರಾಟ ಕಚೇರಿ
PROTEST
Published on


ಮಂಡ್ಯ : ಕೆ.ಆರ್.ಪೇಟೆ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟು, ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಲಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬುಧವಾರ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.


ಇದೇ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಡುಕರ ಹಾವಳಿಯಿಂದಾಗಿ ಗ್ರಾಮಗಳಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ವೈನ್ ಸ್ಟೋರ್‌ಗಳಲ್ಲಿ ಚಿಲ್ಲರೆ ರೂಪದಲ್ಲಿ ಮದ್ಯ ಮಾರಾಟ ಮಾಡಿ ಕುಡಿಯಲು ಅವಕಾಶ ಮಾಡಿಕೊಡುತ್ತಿರುವುದರಿಂದ ಕುಡುಕರ ಸಂಖ್ಯೆ ಹೆಚ್ಚಾಗಿದೆ. ಇದರೊಂದಿಗೆ ಗಲಾಟೆ, ಗದ್ದಲ ಜೋರಾಗಿದೆ. ಗ್ರಾಮಗಳಲ್ಲಿ ನೆಮ್ಮದಿ ವಾತಾವರಣ ಮಾಯವಾಗಿ ಅಶಾಂತಿ ವಾತಾವರಣ ನೆಲೆಸಿದೆ. ಆದ್ದರಿಂದ ಅಬಕಾರಿ ಅಧಿಕಾರಿಗಳು ಕೂಡಲೇ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.


ಕುಡಿತದ ದುಶ್ಚಟಕ್ಕೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವ ಜನಾಂಗಕ್ಕೆ ಎಚ್ಚರಿಸುವ ಕೆಲಸ ಆಗಬೇಕಿದೆ. ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸುವಂತೆ ಯುವಜನರನ್ನು ಅಧಿಕಾರಿಗಳು ಪ್ರೇರೇಪಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಹೊನ್ನೇನಹಳ್ಳಿ ವೇಣು ಆಗ್ರಹಿಸಿದರು.


ನಂತರ ಅಬಕಾರಿ ಸಬ್ಇನ್‌ಸ್ಪೆಕ್ಟರ್ ಅಣ್ಣಪ್ಪಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ಕರವೇ ಪದವೀಧರ ಘಟಕದ ಅಧ್ಯಕ್ಷ ಚೇತನ್‌ಕುಮಾರ್, ನಗರ ಘಟಕದ ಅಧ್ಯಕ್ಷ ಮದನ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಟೆಂಪೋ ಶ್ರೀನಿವಾಸ್, ಹೊಸಹೊಳಲು ಗೋಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net