

ದೇವದುರ್ಗ: ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಜಮೀನು ಉಳುಮೆ ಮಾಡುತ್ತಿರುವ ರೈತರ ಜಮೀನುಗಳನ್ನು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಸರ್ವೇ ನಡೆಸಿದರು.
ಕಂದಾಯ ನಿರೀಕ್ಷಕ ದೇವರೆಡ್ಡಿ ಮಾತನಾಡಿ, ಕಂದಾಯ ಇಲಾಖೆ ಜಮೀನಿನಲ್ಲಿ ರೈತರು ಹಲವು ವರ್ಷಗಳಿಂದ ಬೇಸಾಯ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಫಲಾನುಭವಿಗಳು ಅಕ್ರಮ, ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು.
ಹೇರುಂಡಿ ಗ್ರಾಮದ ಸರ್ವೇ ನಂಬರ್ 8ರಲ್ಲಿ ಅನುಬಂಧ 1ರ ಪ್ರಕಾರ, ಅನುಬಂಧ 2 ತಯಾರಿಸಲು ಸರ್ವೇ ಮಾಡಿ ದಾಖಲೆಯಲ್ಲಿ ಸೇರಿಸಲಾಗುತ್ತಿದೆ. ಬೇಸಾಯ ಮಾಡುವಂತಹ ರೈತರಿಗೆ ಅವರ ಜಮೀನುಗಳನ್ನು ಅಳತೆ ಮಾಡಿ ಪ್ರತ್ಯೇಕ ಸರ್ವೇ ನಂಬರ್ ನೀಡಿ ದಾಖಲೀಕರಣ ಮಾಡುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಕಂದಾಯ ಇಲಾಖೆ ಸರ್ವೇ ಮಾಡುವುದರಿಂದ ಅನುಕೂಲವಾಗಿದೆ. ರೈತರು ಸರ್ವೇ ಕೆಲಸಕ್ಕೆ ಸಹಕರಿಸಬೇಕು ಎಂದರು.
ಗ್ರಾಮ ಆಡಳಿತಾಧಿಕಾರಿ ರುಕ್ಮಿಣಿ ನಾಯಕ, ಅಮರೇಶ, ಬಸವರಾಜ, ನಾಗರಾಜ, ಶಿವಪ್ಪ, ಸಂಗಪ್ಪ ಇತರರಿದ್ದರು.