ಮಹಾನಗರದಲ್ಲಿ ಅನಧಿಕೃತ ಬಡಾವಣೆ, ಶಿಸ್ತು ಕ್ರಮಕ್ಕೆ ಶಾಸಕ ಪ್ರದೀಪ ಶೆಟ್ಟರ್ ಆಗ್ರಹ

IMG-20240724-WA0017.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ವ್ಯಾಪಕವಾಗಿರುವ ಅನಧಿಕೃತ ಹಾಗೂ ಅಕ್ರಮ ಬಡಾವಣೆ ನಿರ್ಮಾಣ ವಿಷಯ ಸದನದಲ್ಲೂ ಸದ್ದು ಮಾಡಿದೆ.

ಮಹಾನಗರದಲ್ಲಿ ಅನಧಿಕೃತ ಬಡಾವಣೆಗಳು ವ್ಯಾಪಕವಾಗಿ ಹುಟ್ಟಿಕೊಂಡಿವೆ ಎಂದು ಸರ್ಕಾರ ಒಪ್ಪಿಕೊಂಡಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೆ ಬಂದ ನಂತರ ಜಮೀನು ಮಾಲೀಕರಿಗೆ ತಹಸೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಅನಧಿಕೃತ ಬಡಾವಣೆಗಳನ್ನು ತೆರವು ಮಾಡಲು ಕ್ರಮ ಜರುಗಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.

2023-24ರಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 122 ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಆದರೆ, ಇದರ ಎರಡು ಪಟ್ಟು ಅನಧಿಕೃತ ಬಡಾವಣೆಗಳು ಮಹಾನಗರದಲ್ಲಿ ತಲೆ ಎತ್ತಿವೆ.

ಇವುಗಳ ವಿರುದ್ಧ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 32ರನ್ವಯ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 17(4)ರನ್ವಯ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅವಳಿನಗರದಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ಜಾಸ್ತಿ ಆಗಿರುವುದರಿಂದ ಜಾಗ ತೆಗೆದುಕೊಳ್ಳುವ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಸಮರ್ಪಕ ದಾಖಲೆ ಇಲ್ಲದೇ ಖರೀದಿ ಮಾಡಿಕೊಳ್ಳಲು ಸಾಧ್ಯವಾಗದೇ ಹಣ, ಸಮಯ, ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಪ್ರದೀಪ ಶೆಟ್ಟರ್ ಗಮನ ಸೆಳೆದಿದ್ದಾರೆ.

ಅಲ್ಲದೇ ಅನಧಿಕೃತ ಬಡಾವಣೆ ನಿರ್ಮಾಣ ಮಾಡುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net