ಹುಬ್ಬಳ್ಳಿಯಲ್ಲಿ ಅನಧಿಕೃತ ಲೇಔಟ್ ತೆರವು

IMG-20240710-WA0014-1.jpg
Published on

ಹುಬ್ಬಳ್ಳಿ: ಅನಧಿಕೃತ ಲೇಔಟಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು (ಹುಡಾ) ಬುಧವಾರ ಇಲ್ಲಿಯ ಬಿಡ್ನಾಳ ಗ್ರಾಮ ವ್ಯಾಪ್ತಿಯಲ್ಲಿ ನಾಲ್ಕು ಎಕರೆಯಲ್ಲಿನ ಎರಡು ಲೇಔಟ್ ಗಳನ್ನು ತೆರವು ಮಾಡಿದೆ.

ಕಳೆದ ಕೆಲ ತಿಂಗಳಿಂದ ಅವಳಿನಗರದ ಯಾವ ಭಾಗದಲ್ಲಿ ಎಷ್ಟೆಷ್ಟು ಅನಧಿಕೃತ ಲೇಔಟ್ ನಿರ್ಮಾಣ ವಾಗಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಹುಡಾ ಇದೀಗ ಮೊದಲ ಹಂತದಲ್ಲಿ ತೆರವು ಕಾರ್ಯಕ್ಕೆ ಇಳಿದಿದೆ.

ಬಿಡ್ನಾಳದಲ್ಲಿನ ಸರ್ವೇ ನಂಬರ್ 22, 42ರಲ್ಲಿ ವಿವಿಧ ಹಿಸ್ಸಾಗಳಲ್ಲಿ ಇದ್ದ ಏಳು ಜನರಿಗೆ ಸೇರಿದ ಜಮೀನಿನಲ್ಲಿ ಅನಧಿಕೃತ ಲೇಔಟ್ ನಿಮಿರ್ಸಲಾಗಿತ್ತು. ಇವರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಇದಕ್ಕೆ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನಧಿಕೃತ ವಿನ್ಯಾಸ ತೆರವು ಮಾಡಿದ್ದಾರೆ.

ಪೊಲೀಸ್ ಭದ್ರತೆಯೊಂದಿಗೆ ಬುಧವಾರ ಬೆಳ್ಳಂಬೆಳಗ್ಗೆ ಜೆಸಿಬಿ ಸಮೇತ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ವಿನ್ಯಾಸದಲ್ಲಿದ್ದ ಗಟಾರು, ರೋಡ್, ಚರಂಡಿ, ನೀರಿನ ಪೈಪ್ ಲೈನ್ ಎಲ್ಲವನ್ನೂ ಕಿತ್ತು ಹಾಕಿಸಿದರು.

ಈ ಸಮದಯಲ್ಲಿ ಕೆಲವರು ತೆರವು ಮಾಡದಂತೆ ಮನವಿ ಮಾಡಿದರು. ಆದರೆ, ಈಗಾಗಲೇ ನೀಡಿರುವ ನೋಟಿಸಿಗೆ ಉತ್ತರ ನೀಡದ್ದರಿಂದ ಮತ್ತೆ ಅವಕಾಶ ನೀಡಲು ಬರುವುದಿಲ್ಲ ಎಂದು ಅಧಿಕಾರಿಗಳು ತೆರವಿಗೆ ಮುಂದಾದರು.

ಕೃಷಿ ಜಮೀನಿನಲ್ಲಿ ಭೂ ಪರಿವರ್ತನೆ ಮಾಡದೇ ಹಾಗೂ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯಿಂದ ಯಾವುದೇ ಪರವಾನಗಿ ಪಡೆಯದೇ ಲೇಔಟ್ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿದ್ದಲ್ಲದೇ ಶೆಡ್ ನಿಮಿರ್ಸಲಾಗಿತ್ತು. ಗುರುತು ಕಲ್ಲುಗಳನ್ನು ನೆಡಲಾಗಿತ್ತು. ಅವೆಲ್ಲವನ್ನು ತೆಗೆದು ಹಾಕಲಾಯಿತು.

ಅನಧಿಕೃತ ಲೇಔಟ್ ನಲ್ಲಿ ನಿಯಮಾವಳಿ ಪ್ರಕಾರ ರಸ್ತೆ, ಚರಂಡಿ ನಿರ್ಮಾಣ ಮಾಡಿರುವುದಿಲ್ಲ. ಉದ್ಯಾನಕ್ಕೆ ಜಾಗ ಸಮರ್ಪಕವಾಗಿ ಬಿಟ್ಟಿರುವುದಿಲ್ಲ, ನಾಗರಿಕ ಸೌಲಭ್ಯದ ಜಾಗವೂ ಇರುವುದಿಲ್ಲ. ಅಲ್ಲದೇ ಸರ್ಕಾರಕ್ಕೆ ಸಲ್ಲಿಕೆಯಾಗಬೇಕಾದ ತೆರಿಗೆ, ಇತರೆ ಬಾಬತ್ತುಗಳನ್ನು ಪಾವತಿಸಿರುವುದಿಲ್ಲ.

ಇಂತಹ ಅನಧಿಕೃತ ಲೇಔಟ್ ನಲ್ಲಿ ಯಾರೂ ನಿವೇಶನ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ಮುಂದೆ ಆಗುವ ತೊಂದರೆಗಳಿಗೆ ಸಾರ್ವಜನಿಕರೇ ಹೊಣೆಯಾಗುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ವಾರ ಮತ್ತೆ ಇಂತಹ ಅನಧಿಕೃತ ಲೇಔಟ್ ತೆರವು ಮಾಡುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹುಡಾ ಆಯುಕ್ತ ಸಂತೋಷ ಬಿರಾದಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net