ಕಟ್ಟಡ ಕಾರ್ಮಿಕರ ಹೆಸರಲ್ಲಿ ಅಕ್ರಮ ಕಾರ್ಡ್ ದಂಧೆ; ರಾಜ್ಯದಲ್ಲಿವೆ ಲಕ್ಷಾಂತರ ಅನಧಿಕೃತ ಚೀಟಿ

8 HVR 2 B
Workers walk in front of the construction site of a commercial complex on the outskirts of the western Indian city of Ahmedabad, in this April 22, 2013 file picture. While India has long suffered from a dearth of workers with vocational skills like plumbers and electricians, efforts to alleviate poverty in poor, rural areas have helped stifle what was once a flood of cheap, unskilled labour from India's poorest states. Struggling to cope with soaring food prices, this dwindling supply of migrant workers are demanding - and increasingly getting - rapid increases in pay and benefits. To match story INDIA-ECONOMY/INFLATION REUTERS/Amit Dave/Files (INDIA - Tags: BUSINESS CONSTRUCTION EMPLOYMENT TPX IMAGES OF THE DAY)
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಬಡ ಹಾಗೂ ಸಮಾಜದ ಮುಖ್ಯವಾಹಿನಿಗೆ ಬಾರದ ಕಟ್ಟಡ ಕಾರ್ಮಿಕರ ಅಭ್ಯುದಯಕ್ಕಾಗಿ ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಕಟ್ಟಡ ಕಾರ್ಮಿಕರ ಕಾರ್ಡುಗಳ ಹೆಸರಲ್ಲಿ ಬೃಹತ್ ಅಕ್ರಮ ದಂಧೆ ನಡೆಯುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ಕಾರ್ಡುಗಳು ಸೃಷ್ಟಿಯಾಗಿರುವ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹೆಸರಲ್ಲಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಮಂಡಳಿ ಸ್ಥಾಪಿಸಿ, ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಇದೇ ಕಾರಣಕ್ಕೆ ರಾಜ್ಯದಾದ್ಯಂತ ಅನೇಕ ಅನಧಿಕೃತ ಕಾರ್ಡುಗಳು ಸೃಷ್ಟಿಯಾಗಿವೆ. ಅನಧಿಕೃತ ಕಾರ್ಡುಗಳ ಪತ್ತೆಗಾಗಿ ಸ್ವತಃ ಕಾರ್ಮಿಕ ಇಲಾಖೆಯಿಂದಲೇ ಜ.25ರಿಂದ ಫೆ.25ರವರೆಗೆ ಅಭಿಯಾನ ಹಮ್ಮಿಕೊಂಡಿರುವುದು ಅಕ್ರಮ ನಡೆದಿರುವುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.
ರಾಜ್ಯದ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಬೀಡು ಬಿಟ್ಟಿರುವ ಮದ್ಯವರ್ತಿಗಳು, ಕಟ್ಟಡ ಕಾರ್ಮಿಕರ ಹೆಸರಲ್ಲಿ ಸಂಸ್ಥೆ ಮಾಡಿಕೊಂಡಿರುವ ಕೆಲ ಸಂಸ್ಥೆಗಳು ಅಕ್ರಮ ದಾಖಲೆ ಸೃಷ್ಟಿಸಿ, ಹಣ ಪಡೆದು ಯಾರ‌್ಯಾರದ್ದೋ ಹೆಸರಲ್ಲಿ ಕಾರ್ಡುಗಳನ್ನು ಮಾಡಿಸಿಕೊಟ್ಟಿವೆ. ಇದರಿಂದಾಗಿ ಅಧಿಕೃತ ಕಟ್ಟಡ ಕಾರ್ಮಿಕರಿಗೂ ಭೀತಿ ಶುರುವಾಗಿದೆ.
ಕಟ್ಟಡ ನಿರ್ಮಿಸುವ ಲೈಸನ್ಸ್ ಹೊಂದಿರುವ ಗುತ್ತಿಗೆದಾರರಿಂದ ಪ್ರಮಾಣ ಪತ್ರ ಹೊಂದಿರುವ ಕಟ್ಟಡ ಕಾರ್ಮಿಕರಿಗೆ ಮಾತ್ರ ಈ ಕಾರ್ಡು ನೀಡಲಾಗುತ್ತದೆ. ನಕಲಿ ದಾಖಲೆ ಸೃಷ್ಟಿಸಿ ಕಾರ್ಡು ಪಡೆಯುವ ದಂಧೆ ಸದ್ದಿಲ್ಲದೇ ನಡೆಯುತ್ತಿದೆ. ಇದರಲ್ಲಿ ಇಲಾಖೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ, ಅಧಿಕೃತ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕಿದೆ.
ಭರಪೂರ ಕೊಡುಗೆ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ಕಾರ್ಡು ಹೊಂದಿರುವ ಫಲಾನುಭವಿಗಳಿಗೆ ಮಂಡಳಿಯಿಂದ ಭರಪೂರ ಕೊಡುಗೆಗಳನ್ನು ನೀಡಲಾಗುತ್ತಿದೆ. ಕಾರ್ಡು ಹೊಂದಿದವರು ಸಹಜವಾಗಿ ಮೃತಪಟ್ಟರೆ ಮಂಡಳಿಯಿಂದ 54 ಸಾವಿರ ರೂ., ಕೆಲಸ ಮಾಡುವಾಗ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಪ್ರತಿ ತಿಂಗಳು 3 ಸಾವಿರ ಪಿಂಚಣಿ ನೀಡಲಾಗುತ್ತದೆ. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ 2ರಿಂದ 35 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನ, ಕರೊನಾ ಸಂದರ್ಭದಲ್ಲಿ ತಲಾ 5 ಸಾವಿರ ರೂ. ಸಹಾಯಧನ, ಮನೆ ನಿರ್ಮಾಣಕ್ಕೆ ಬಡ್ಡಿ ರಹಿತ 2 ಲಕ್ಷ ರೂ. ಸಾಲ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳನ್ನು ಮಂಡಳಿಯಿಂದ ರೂಪಿಸಲಾಗಿದೆ.
ಕೋಟ್ಯಂತರ ರೂ. ಸಂಗ್ರಹ
ಕಟ್ಟಡ ಕಾರ್ಮಿಕರ ಅಭಿವೃದ್ಧಿಗಾಗಿ ಸರ್ಕಾರದಿಂದ ಶೇ.1ರಷ್ಟು ಸೆಸ್ ಸಂಗ್ರಹಿಸಲಾಗುತ್ತಿದೆ. ಖಾಸಗಿಯವರ 10 ಲಕ್ಷ ರೂ. ಮೇಲ್ಪಟ್ಟ ಪ್ರತಿಯೊಂದು ಕಟ್ಟಡ ನಿರ್ಮಾಣ ಕಾಮಗಾರಿಯಿಂದ ಹಾಗೂ ಸರ್ಕಾರದ ಎಲ್ಲ ಕಾಮಗಾರಿಯಿಂದ ಶೇ.1ರಷ್ಟು ಸೆಸ್ ಪಡೆಯಲಾಗುತ್ತಿದೆ. ಈ ಹಣವೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೊಕ್ಕಸದಲ್ಲಿ ಸಾವಿರಾರು ಕೋಟ್ಯಂತರ ರೂ. ಸಂಗ್ರಹವಾಗಿದೆ. ಈ ಹಣದ ಮೇಲೆ ವಂಚಕರ ಕಣ್ಣು ಬಿದ್ದಿದೆ.
ಕಾರ್ಮಿಕ ಸಚಿವರ ಜಿಲ್ಲೆಯಲ್ಲೇ 50 ಸಾವಿರ ಅನಧಿಕೃತ ಕಾರ್ಡು ?
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉಸ್ತುವಾರಿ ಹೊಂದಿರುವ ಹಾವೇರಿ ಜಿಲ್ಲೆಯೊಂದರಲ್ಲೇ ಎರಡೂವರೆ ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡುಗಳು ಚಾಲ್ತಿಯಲ್ಲಿವೆ. ಇದರಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಅಕ್ರಮ ಕಾರ್ಡುಗಳಿವೆ ಎಂದು ಮೂಲಗಳು ತಿಳಿಸಿವೆ.
ಇತರರಿಗೂ ಮಂಡಳಿ ರೂಪಿಸಿ
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಕಾರ್ಡು ನೀಡಬೇಕು ಎಂಬ ನಿಯಮವಿದೆ. ಆದರೆ, ಕೂಲಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಬೀಡಿ ಕಾರ್ಮಿಕರು ಸೇರಿದಂತೆ ಇತರರ ಹೆಸರುಗಳಲ್ಲಿ ಅಕ್ರಮವಾಗಿ ಕಾರ್ಡು ಪಡೆಯಲಾಗಿದೆ. ಹಾಗಾಗಿ, ಕಟ್ಟಡ ಕಾರ್ಮಿಕರಂತೆ ಇತರ ವರ್ಗದ ಎಲ್ಲ ಕಾರ್ಮಿಕರಿಗೂ ಸರ್ಕಾರ ಪ್ರತ್ಯೇಕ ಕಲ್ಯಾಣ ಮಂಡಳಿ ರೂಪಿಸಬೇಕು. ಅಂದಾಗ ಮಾತ್ರ ಇಂತಹ ಸಮಸ್ಯೆ ಉದ್ಭವಿಸುವುದಿಲ್ಲ ಎಂಬುದು ಇತರ ವಲಯದ ಕಾರ್ಮಿಕರ ಒತ್ತಾಯ.
ಕೋಟ್:
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ಕಾರ್ಮಿಕರಿಗೆ ನೀಡುವ ಕಾರ್ಡುಗಳನ್ನು ಪಡೆದಿರುವ ಕುರಿತು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇವುಗಳ ಪತ್ತೆಗಾಗಿ ಜ.25ರಿಂದ ಫೆ.25ರವರೆಗೆ ಬೃಹತ್ ಆಂದೋಲನ ಆರಂಭಿಸಲಾಗಿದೆ.
ಶಿವರಾಮ ಹೆಬ್ಬಾರ, ಕಾರ್ಮಿಕ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net