

ರಾಯಚೂರು: ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ನವಲಿ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಅಕ್ರಮವಾಗಿ ಹಾಕಿರುವ ಪೈಪ್ ತೆರವಿಗೆ ಪಕ್ಷಾತೀತವಾಗಿ ಆ.6ರಂದು ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಹೋರಾಟದಲ್ಲಿ ಭಾಗವಹಿಸುವುದಾಗಿ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಬಳಕೆಯಿಂದ ಕೆಳಭಾಗದಲ್ಲಿನ ರೈತರ ಭೂಮಿಗಳಿಗೆ ನೀರು ದೊರೆಯುತ್ತಿಲ್ಲ. ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಕಾಲುವೆ ಮೇಲ್ಭಾಗದಲ್ಲಿ ಅಕ್ರಮ ಪೈಪ್‌ಗಳ ಮೂಲಕ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಗೆ ಅಕ್ರಮವಾಗಿ ನೀರು ಪಡೆಯಲಾಗುತ್ತದೆ. ಈ ಕುರಿತು ನೀರಾವರಿ ಸಲಹಾ ಸಮಿತಿಯಲ್ಲಿ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಕ್ರಮ ಪೈಪ್ ತೆರವುಗೊಳಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದಾಗಿ ಕ್ಷೇತ್ರದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೆಯಲ್ಲಿ ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾರೆ.