ಹೊನ್ನೇನಹಳ್ಳಿಯಲ್ಲಿ ಅಕ್ರಮ ಬಡಾವಣೆ ತೆರವು, ತಹಸೀಲ್ದಾರ್ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯಾಚರಣೆ

8 dpt 1 honnenahlliylli akrama lay tervu thsillddar
Published on

ದಾಬಸ್‌ಪೇಟೆ: ಸೋಂಪುರ ಹೋಬಳಿಯ ಹೊನ್ನೇನಹಳ್ಳಿಯ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಬಡಾವಣೆಯನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ನೆಲಮಂಗಲ ತಹಸೀಲ್ದಾರ್ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಹೊನ್ನೇನಹಳ್ಳಿ ಗ್ರಾಮದ ಸರ್ವೇ ನಂ.65/5 ರಲ್ಲಿ ಇರುವ 1.2 ಎಕರೆ ಭೂಮಿಯನ್ನು ವಸತಿ ಉದ್ದೇಶಗಳಾಗಿ ಪರಿವರ್ತಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿಯ ಮಾಲೀಕರಿಗೆ ಎರಡು ಬಾರಿ ನೋಟಿಸ್ ನೀಡಿದ್ದು, ಉತ್ತರ ನೀಡದ ಹಿನ್ನೆಲೆಯಲ್ಲಿ ಗುರುವಾರ ದಾಳಿ ಮಾಡಿ, ಅಕ್ರಮ ಬಡಾವಣೆಯನ್ನು ತೆರವುಗೊಳಿಸಲಾಯಿತು.

ಸೈಟ್ ಕೊಂಡವರ ಪಡಿಪಾಟಲು: ಈ ಭೂಮಿಯಲ್ಲಿ ನಿರ್ಮಿಸಿದ್ದ ನಿವೇಶನವನ್ನು ಸಾಲ ಮಾಡಿ ಖರೀದಿಸಿದ್ದೇವೆ. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಅದನ್ನು ನೋಂದಾಯಿಸಲಾಗಿದೆ. ಹೊನ್ನೇನಹಳ್ಳಿ ಪಂಚಾಯಿತಿಯಲ್ಲೂ ನೋಂದಣಿ ಮಾಡಲಾಗಿದೆ. ಇವೆಲ್ಲವೂ ಸರ್ಕಾರದಿಂದ ಮಾಡಿರುವುದು. ಆದರೆ, ಈಗ ಇದನ್ನು ಅನಧಿಕೃತ ಎಂದು ಹೇಳಲಾಗುತ್ತಿದೆ. ಈಗ ನಾವೇನು ಮಾಡಬೇಕು ಎಂದು ನಿವೇಶನ ಮಾಲೀಕರು ಬೇಸರ ವ್ಯಕ್ತಪಡಿಸಿದರು.

ಮಾಲೀಕರ ವಿರುದ್ಧ ದೂರು: ಕೃಷಿ ಜಮೀನಿನಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಈ ಬಗ್ಗೆ ಭೂಮಾಲೀಕರಿಗೆ ನೋಟಿಸ್ ನೀಡಿದ್ದೆವು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬಡಾವಣೆಯನ್ನು ತೆರವುಗೊಳಿಸಲಾಗಿದೆ. ಇಲ್ಲಿ ಸೈಟ್ ಖರೀದಿಸಿದ ಅನೇಕರು ಬಂದು ಸಂಕಟ ತೋಡಿಕೊಂಡಿದ್ದಾರೆ. ಅವರ ದೂರಿನ ಮೇರೆಗೆ ನಾವು ಭೂಮಿ ಮಾಲೀಕರ ವಿರುದ್ಧವೇ ದೂರು ದಾಖಲಿಸುತ್ತೇವೆ ಎಂದು ನೆಲಮಂಗಲ ತಹಸೀಲ್ದಾರ್ ಎಂ. ಶ್ರೀನಿವಾಸ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net