

ಉಡುಪಿ: ಮಣಿಪಾಲ ಮತ್ತು ಪಡುಬಿದ್ರಿ ಪೊಲೀಸರ ಕಾರ್ಯಾಚರಣೆ ನಡೆಸಿ 6,34,970 ಮೌಲ್ಯದ ಐ.ಟಿ.ಸಿ ಕಂಪೆನಿಯ ಗೋಲ್ಡ್ ಫ್ಲೇಕ್ ನಕಲಿ ಸಿಗರೇಟ್‌ಗಳು , ವಿದೇಶಿ ಕಂಪನಿಯ ಸಿಗರೇಟ್ ಹಾಗೂ 113 ನಿಷೇಧಿತ ಇ- ಸಿಗರೇಟ್‌ಗಳನ್ನು ವಶಕ್ಕೆ ಪಡೆದಿದ್ದು, 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮಂಗಳವಾರ ಅಕ್ರಮವಾಗಿ ಇ- ಸಿಗರೇಟ್ ಸಂಗ್ರಹಿಸಿ, ವಿದೇಶಿ ಕಂಪನಿಯ ಸಿಗರೇಟುಗಳನ್ನು ಎಂ.ಆರ್.ಪಿ ದರ ನಮೂದಿಸದೇ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಮಣಿಪಾಲದ ಶೀಶಾ ಪ್ಯಾರಡೈಸ್ ಮತ್ತು ಸ್ಮೋಕ್ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಎರಡೂ ಅಂಗಡಿಗಳಿಂದ ಸುಮಾರು 1,50,000 ರೂ ಮೌಲ್ಯದ 113 ವಿವಿಧ ಕಂಪನಿಯ ನಿಷೇದಿತ ಇ- ಸಿಗರೇಟ್ಗಳು ಹಾಗೂ 5,000 ರೂ ಮೌಲ್ಯದ ವಿದೇಶಿ ಕಂಪನಿಯ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರ ತಾಲೂಕು ಉಪ್ಪಳ ಗ್ರಾಮದ ನಿವಾಸಿಗಳಾದ ಶೀಶಾ ಪ್ಯಾರಡೈಸ್ ಅಂಗಡಿ ಮಾಲೀಕ ಅನ್ಸಾರ್ ಹಾಗೂ ಸ್ಮೋಕ್ ಕೋ ಅಂಗಡಿಯ ಮಾಲೀಕ ಮುಫೀನ್ ಎಂಬುವವರನ್ನು ಬಂಧಿಸಲಾಗಿದೆ.
ಸೋಮವಾರ ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಸಮಯದಲ್ಲಿ ಯಾವುದೇ ದಾಖಲೆ ಇಲ್ಲದ ಒಟ್ಟು 4,79,970 ರೂ ಮೌಲ್ಯದ ಸಿಗರೇಟ್ ಬಂಡಲ್‌ಗಳು ಮತ್ತು ನಿಷೇಧಿತ ಇ-ಸಿಗರೇಟ್‌ಗಳನ್ನು , ಸಾಗಾಟಕ್ಕೆ ಉಪಯೋಗಿಸಿದ ಕಾರು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಮಂಜೇಶ್ವರ ತಾಲೂಕು ವರ್ಕಾಡಿ ಗ್ರಾಮದ ಅಬ್ದುಲ್ ಖಾದರ್ ಅನ್ಸಾರ್ ಹಾಗೂ ಪೊಸೋಡು ಗ್ರಾಮದ ಸುಫಿಯಾನ್ ಶೌರಿ ಎಂಬುವವರನ್ನು ಬಂಧಿಸಲಾಗಿದೆ.
ಸರ್ಕಾರವು ಇ-ಸಿಗರೇಟ್‌ನ್ನು ನಿಷೇಧ ಮಾಡಿದ್ದು, ಐ.ಟಿ.ಸಿ ಕಂಪೆನಿಯ ನಕಲಿ ಗೋಲ್ಡ್ ಫ್ಲೇಕ್ ಸಿಗರೇಟ್ , ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್ ಗಳನ್ನು ಪತ್ತೆ ಹಚ್ಚಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಹಾಗೂ ಪಡುಬಿದ್ರೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ. 3 ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದ್ದು, ಸಾರ್ವಜನಿಕರಿಗೆ ನಿಷೇದಿತ ಇ- ಸಿಗರೇಟು ಹಾಗೂ ನಕಲಿ ಸಿಗರೇಟುಗಳ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ತಿಳಿಸಿದ್ದಾರೆ.