ಅಕ್ರಮ ವಿದ್ಯುತ್ ಸಂಪರ್ಕ : ಮೈಸೂರು ವಿಭಾಗದಲ್ಲಿ 6 ಕೋಟಿ ರೂ. ದಂಡ

Illegal electricity connection Rs 6 crore fine in Mysore division
Published on

ಮೈಸೂರು: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದವರ ವಿರುದ್ಧ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ಜಾಗೃತ ದಳದ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡು 6 ಕೋಟಿ ರೂ. ದಂಡ ವಿಧಿಸಿದ್ದಾರೆ.

ಸೆಸ್ಕ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸೆಸ್ಕ್ ಜಾಗೃತದಳದ ಪೊಲೀಸ್ ಅಧೀಕ್ಷಕಿ ಸವಿತಾ ಹೂಗಾರ ನೇತೃತ್ವದಲ್ಲಿ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸೆಸ್ಕ್ ವಿಭಾಗ ವ್ಯಾಪ್ತಿಗೆ ಒಳಪಡುವ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆ ಮೂಲಕ ಅಕ್ರಮವಾಗಿ ವಿದ್ಯುತ್ ಕಳ್ಳತನ, ವಿದ್ಯುತ್ ದುರುಪಯೋಗ ಮಾಡಿದವರ ವಿರುದ್ಧ ಕ್ರಮಕೈಗೊಂಡು ಪ್ರಕರಣಗಳನ್ನು ದಾಖಲಿಸಲಾಗಿದೆ.

ಸೆಸ್ಕ್ ಜಾಗೃತದಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಗೃಹ, ವಾಣಿಜ್ಯ, ಕೈಗಾರಿಕೆ, ತಾತ್ಕಾಲಿಕ ಸ್ಥಾವರಗಳು ಮತ್ತು ಇತರ ಕಡೆಗಳಲ್ಲಿ 5716 ಸ್ಥಾವರಗಳನ್ನು ಜಾಗೃತದಳದ ಅಧಿಕಾರಿಗಳು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ 1312 ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣಗಳಿಂದ ಒಟ್ಟು 6,36,72,607 ರೂ. ದಂಡ ವಿಧಿಸಿದ್ದು, ಸದರಿ ಅವಧಿಯಲ್ಲಿ ಹಿಂದಿನ ಪ್ರಕರಣಗಳು ಸೇರಿ 5,94,89,898 ರೂ. ದಂಡ ವಸೂಲಿ ಮಾಡಲಾಗಿದೆ.

ಮೀಟರ್ ಪರಿಶೀಲನೆ ವಿಭಾಗದಿಂದ ವಿವಿಧ ವಿಭಾಗಗಳಲ್ಲಿ ಒಟ್ಟು 23,014 ಸ್ಥಾವರಗಳ ರೇಟಿಂಗ್ ಮಾಡಿ, ಲೋಪಗಳಿರುವ ಕಡೆಗಳಲ್ಲಿ ಗುರುತಿಸಲಾಗದ ಪ್ರಕರಣಗಳನ್ನು ದಾಖಲಿಸಿ 12,37,56,660 ರೂ. ದಂಡವನ್ನು ವಿಧಿಸಲಾಗಿದೆ.

ವಿದ್ಯುತ್ ಕಳ್ಳತನ ಮಾಡುವುದು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದ್ದು, ವಿದ್ಯುತ್ ಕಳ್ಳತನ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸೆಸ್ಕ್ ಜಾಗೃತ ದಳದ ಕಾರ್ಯನಿರ್ವಾಹಕ ಇಂಜಿನಿಯರ್ ಸಿ. ಉಮೇಶ್, ಪೊಲೀಸ್ ಉಪ ಅಧೀಕ್ಷಕ ಆನಂದಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net