

ಮಂಗಳೂರು: ನಗರ ಮಧ್ಯದ ಕುದ್ರೋಳಿಯಲ್ಲಿ ಅಕ್ರಮವಾಗಿ ಕಸಾಯಿಖಾನೆ ಕಾರ್ಯಾಚರಿಸುತ್ತಿದ್ದು, ದಿನಂಪ್ರತಿ ಗೋವು, ಕುರಿ, ಆಡು ಸೇರಿದಂತೆ ನೂರಾರು ಜಾನುವಾರುಗಳ ವಧೆಯಾಗುತ್ತಿದೆ. ಮೇಯರ್ ಮನೋಜ್ ಕುಮಾರ್ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ ಅಲ್ಲಿನ ಅಕ್ರಮ ವ್ಯವಹಾರಗಳು ಬಯಲಿಗೆ ಬಂದಿವೆ.
ಈ ಹಿಂದೆ ಇಲ್ಲಿ ಕಾರ್ಯಾಚರಿಸುತ್ತಿದ್ದ ಕಸಾಯಿ ಖಾನೆ ನಾಲ್ಕು ವರ್ಷದ ಹಿಂದೆ ಹಸಿರು ಪೀಠದ ಆದೇಶ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿದೆ. ಆದರೆ ಈ ಕಸಾಯಿಖಾನೆ ಅದರ ಬಳಿಯಲ್ಲೇ ಖಾಸಗಿ ಜಾಗದಲ್ಲಿ ಅಕ್ರಮವಾಗಿ ಪ್ರಾಣಿಗಳನ್ನು ವಧೆ ಮಾಡುತ್ತಿರುವುದು ಪತ್ತೆಯಾಗಿದೆ.
ಸಾವಿರಾರು ರುಂಡ ಪತ್ತೆ: ಖಾಸಗಿ ಜಾಗದಲ್ಲಿರುವ ಕಟ್ಟಡದೊಳಗೆ ಸುಮಾರು ಸಾವಿರಕ್ಕೂ ಅಧಿಕ ಆಡು, ಕುರಿ, ಜಾನುವಾರುಗಳ ರುಂಡ, ದೇಹದ ಭಾಗಗಳು ಪತ್ತೆಯಾಗಿದೆ. ಇದರಿಂದ ಪರಿಸರವಿಡೀ ವಾಸನೆ ಬರುತ್ತಿತ್ತು. ರಾಶಿ ರಾಶಿ ನೊಣಗಳು ಪ್ರಾಣಿಗಳ ಅಸ್ತಿಪಂಜರ ಮೇಲೆ ಮುತ್ತಿಕ್ಕುತ್ತಿದ್ದವು. ಆ ಕೋಣೆಯಲ್ಲಿ ಹೆಜ್ಜೆಹೆಜ್ಜೆಗೂ ಪ್ರಾಣಿಗಳ ದೇಹದ ಭಾಗಗಳು ಬಿದ್ದುಕೊಂಡಿವೆ.
ಬೀಗ ಒಡೆದು ಒಳನುಗ್ಗಿದರು: ಮೇಯರ್ ದಾಳಿ ಸಂದರ್ಭ ಖಾಸಗಿ ಜಾಗದ ಮುಂಭಾಗದ ಕಟ್ಟಡದ ತೆರೆದೇ ಇತ್ತು. ಹಿಂಭಾಗದ ಕಟ್ಟಡದತ್ತ ನೋಡುವಾಗ ಬೀಗ ಜಡಿದಿತ್ತು. ಬೀಗ ಯಾರಲ್ಲಿ ಇದೆ ಕೇಳುವಾಗ ಯಾರಲ್ಲೂ ಉತ್ತರವಿರಲಿಲ್ಲ. ಇದರಿಂದ ಗರಂ ಆದ ಮೇಯರ್ ಮನೋಜ್ ಕುಮಾರ್ ಹಾಗೂ ಕಾರ್ಪೊರೇಟರ್ ಮನೋಹರ್ ಶೆಟ್ಟಿ ತಾವೇ ಕಲ್ಲು ತಂದು ಬೀಗ ಮುರಿದು ಒಳನುಗ್ಗಿದರು. ಈ ಸಂದರ್ಭ ಜಾನುವಾರು ವಧೆ ಮಾಡುವ ಸ್ಥಳ, ತೂಕ ಮಾಪನ, ಮಾಂಸ ಜೋತು ಹಾಕುವ ಹುಕ್‌ಗಳು ಪತ್ತೆಯಾಗಿವೆ.
ಅಕ್ರಮ ಕಟ್ಟಡ ತೆರವಿಗೆ ಸೂಚನೆ: ಕುದ್ರೋಳಿ ಅಕ್ರಮ ಕಸಾಯಿಖಾನೆ ಸಮೀಪ ಮನಪಾಕ್ಕೆ ಸಂಬಂಧಪಟ್ಟ ಜಾಗದಲ್ಲೇ 5 ಅಕ್ರಮ ಕಟ್ಟಡಗಳು ಕಂಡು ಬಂದಿದ್ದು, ಅದರಲ್ಲಿ ಗುಜರಿ ವ್ಯಾಪಾರ ನಡೆಸಲಾಗುತ್ತಿದೆ. ಕೂಡಲೇ ಅದನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.
ಮೇಯರ್ ಮನೋಜ್ ಕುಮಾರ್ ಅವರು ಉಪಮೇಯರ್ ಭಾನುಮತಿ, ಪಟ್ಟಣ ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಮಂಗಳ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಿತ್ರಾ ಕರಿಯ ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ನೇತೃತ್ವದ ನಿಯೋಗ ದಾಳಿ ನಡೆಸಿತು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮೇಯರ್
ಕಸಾಯಿಖಾನೆಗೆ ಮೇಯರ್ ಭೇಟಿ ನೀಡಿದಾಗ ಎದುರು ಭಾಗದಲ್ಲಿ ಜಾನುವಾರ ವಧೆ ಮಾಡುವ ಬಗ್ಗೆ ಯಾವುದೇ ಕುರುಹು ಸಿಗಲಿಲ್ಲ. ಇದಾದ ಬಳಿಕ ಖಾಸಗಿ ಜಾಗದಲ್ಲಿರುವ ಕಟ್ಟಡವನ್ನು ಪರಿಶೀಲನೆ ನಡೆಸಿದಾಗ ಗೋವು, ಆಡು, ಕುರಿಗಳ ರುಂಡಗಳು, ದೇಹದ ಭಾಗಗಳು ಒಂದು ಕೊಣೆಯಿಡೀ ರಾಶಿ ಬಿದ್ದಿರುವುದು ಪತ್ತೆಯಾಗಿದೆ. ಇದನ್ನು ನೋಡಿ ಗರಂ ಆದ ಮೇಯರ್ ‘ಆರೋಗ್ಯ ಅಕಾರಿಗಳೇ ನೀವೇನು ಮಾಡುತ್ತಿದ್ದೀರಿ. ನಗರದ ಹೃದಯಭಾಗದಲ್ಲೇ ಇಂತಹ ಚಟುವಟಿಕೆ ನಿರಂತರ ನಡೆಯುತ್ತಿರುವಾಗ ನಿಮಗೆ ಯಾಕೆ ಗೊತ್ತಾಗಲ್ಲ?’ ಕೂಡಲೇ ಕ್ರಮಕೈಗೊಳ್ಳಿ. ಬಡವರ ಬಗ್ಗೆ ವಿವಿಧ ರೀತಿಯ ದಂಡ ಪ್ರಯೋಗ ಮಾಡುವ ನೀವು ಇಂತಹ ಅಕ್ರಮ ಕಟ್ಟಡಗಳ ಬಗ್ಗೆ ಗೊತ್ತಿದ್ದೂ ಯಾಕೆ ಸುಮ್ಮನಿದ್ದೀರಿ. ಕೂಡಲೇ ಅಕ್ರಮ ಕಟ್ಟಡ, ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಿ ಎಂದು ಮೇಯರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.