

ವಿಜಯಪುರ: ಹಣ ಪಡೆದು ಕೆಲಸಕ್ಕೆ ಬಾರದ ವ್ಯಕ್ತಿಯನ್ನು ಕಾಲಿಗೆ ಸರಪಳಿ ಹಾಕಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಚಡಚಣದ ಕುಮಾರ್‌ಅರ್ಜುನ್ ಸಿದ್ಗೊಂಡ ಬಿರಾದಾರ ಹಾಗೂ ಉಮರಾಣಿಯ ಶ್ರೀಶೈಲ ಗಿರಿಯಪ್ಪ ಪಿರಗೊಂಡ ಬಂಧಿತರು. ಜು. 18ರಂದು ಬಾಷಾಸಾಬ್ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಡ್ರೈವಿಂಗ್ ಕೆಲಸಕ್ಕೆ ಬರುವುದಾಗಿ ಹೇಳಿ 20 ಸಾವಿರ ರೂಪಾಯಿ ಪಡೆದುಕೊಂಡಿದ್ದನು. ಆದರೆ, ಕೆಲಸಕ್ಕೂ ಬಾರದೆ ಹಣವೂ ಮರಳಿ ಕೊಡದ ಹಿನ್ನೆಲೆ ಆತನನ್ನು ಚಡಚಣದಿಂದ ಬೈಕ್ ಮೇಲೆ ಹತ್ತಿಸಿಕೊಂಡು ಬಂದಿದ್ದ ಕುಮಾರ್‌ಅರ್ಜುನ್ ಹಾಗೂ ಶ್ರೀಶೈಲ ಹತ್ತಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಿರಾದಾರ ಎಂಬುವರ ಅಂಗಡಿ ಮುಂದೆ ಕಾಲಿಗೆ ಸರಪಳಿ ಹಾಕಿ ಕಬ್ಬಿಣದ ಕಂಬಕ್ಕೆ ಕಟ್ಟಿ ಹಾಕಿದ್ದರು.
ಬೆಳಗ್ಗೆಯಿಂದ ಸಂಜೆ 4ರವರೆಗೂ ಬಂಧಿಸಿದ ಕುರಿತ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಕುರಿತು ಚಡಚಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.