ಮತದಾರರಪಟ್ಟಿಯಲ್ಲಿ ಅಕ್ರಮ ಆರೋಪ, ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಬಿದರಗುಪ್ಪೆ ಗ್ರಾಮಸ್ಥರು

16ank news and photos 01
Published on

ಆನೇಕಲ್: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪರಿಷ್ಕೃತ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ಬುಧವಾರ ಸಂಜೆ ಬಿದರಗುಪ್ಪೆ ಹಾಗೂ ವಿವಿಧ ಗ್ರಾಪಂಗಳ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಅತ್ತಿಬೆಲೆ ಪುರಸಭೆ ವ್ಯಾಪ್ತಿಯ ಮತದಾರರನ್ನು ಇಂಡ್ಲಬೆಲೆ ಗ್ರಾಪಂ ವ್ಯಾಪ್ತಿಗೆ ಅಕ್ರಮವಾಗಿ ಸೇರಿಸಲಾಗಿದೆ. ಬಿಜೆಪಿ ಮುಖಂಡರೊಬ್ಬರು ಅಧಿಕಾರ ಬಳಸಿಕೊಂಡು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮವೆಸಗಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಚುನಾವಣೆ ಮುಂದೂಡಿ, ಮನೆಮನೆಗೆ ತೆರಳಿ ಪರಿಶೀಲಿಸಿ ಮತದಾರರ ಪಟ್ಟಿ ತಯಾರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅತ್ತಿಬೆಲೆ ವೇಣು ಒತ್ತಾಯಿಸಿದರು.

ಡಿ.8ಕ್ಕೆ ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಂತಿಮ. ಆದರೆ ಡಿ.15ರಂದು ಸಹ ಹಲವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಇದು ಬಿಜೆಪಿಯವರ ಷಡ್ಯಂತ್ರ. ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಯತ್ನಿಸಿದ್ದಾರೆ. ಈ ಕೂಡಲೇ ಮತದಾರರ ಪಟ್ಟಿಯಿಂದ ಅಕ್ರಮವಾಗಿರುವುದನ್ನು ಕೈಬಿಡದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ತಾಪಂ ಸದಸ್ಯ ಶಂಕರ್ ರೆಡ್ಡಿ ಎಚ್ಚರಿಕೆ ನೀಡಿದರು.

ತಪ್ಪು ಮಾಡಿರುವ ಆರ್‌ಐ ಹಾಗೂ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರ ಕುಮ್ಮಕ್ಕಿನಿಂದ ತಮಿಳುನಾಡಿನಿಂದ ಕೆಲವರನ್ನು ಕರೆತಂದು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸಿ, ಅಕ್ರಮ ಕಂಡುಬಂದರೆ ಸೇರ್ಪಡೆ ಮಾಡಿರುವ ಹೊಸ ಹೆಸರನ್ನು ತೆಗೆದು ಹಾಕಲಾಗುವುದು ಎಂದು ತಹಸೀಲ್ದಾರ್ ಮಹದೇವಯ್ಯ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net