

ಬೆಳಗಾವಿ: ನಗರದಲ್ಲಿ ವರ್ಷಗಳಿಂದ ನನೆಗುದಿಗೆ ಬಿದ್ದಿದ ರಸ್ತೆ ಅಗಲೀಕರಣ ಮತ್ತು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಅಧಿಕಾರಿಗಳು ಬುಧವಾರ ಟಿಳಕವಾಡಿಯಲ್ಲಿರುವ 29 ಮಳಿಗೆಗಳ ಪೈಕಿ 6 ಮಳಿಗೆಗಳನ್ನು ನೆಲಸಮಗೊಳಿಸಿದ್ದಾರೆ.
ಹಲವು ವರ್ಷಗಳಿಂದೆ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪಾಲಿಕೆ ಆಸ್ತಿಗಳಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿತ್ತು. ಈ ಕಟ್ಟಡ ತೆರವುಗೊಳಿಸುವಂತೆ ಮಾಲೀಕರಿಗೆ ಪಾಲಿಕೆ ನೋಟೀಸ್ ನೀಡಿದ್ದರು ಸ್ಪಂದನೆ ನೀಡಿರಲಿಲ್ಲ. ಪರಿಣಾಮ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಸೇರಿ ಪಾಲಿಕೆಯ ವಿವಿಧ ಕಾಮಗಾರಿಗಳು ಅರ್ಧದಲ್ಲಿಯೇ ಮೊಟಕುಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಬುಧವಾರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮ ಕಟ್ಟಡ ಹೊಂದಿದವರಿಗೆ ಎಚ್ಚರಿಕೆ ನೀಡಿದ್ದಾರೆ.3 ವರ್ಷಗಳಿಂದ ವ್ಯಾಪಾರಸ್ಥರು ಮತ್ತು ಅಂಗಡಿಗಳ ಮಾಲೀಕರು ರಸ್ತೆ ಅಗಲೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರಿಂದ ತೆರವು ಕಾರ್ಯಾಚರಣೆ ಮೊಟಕುಗೊಂಡಿತ್ತು. ಇದೀಗ ನ್ಯಾಯಾಲಯದಲ್ಲಿರುವ ಅಂಗಡಿಗಳನ್ನು ಕೈಬಿಟ್ಟು ಬಾಕಿ ಉಳಿದಿರುವ 29 ಕಟ್ಟಡ ತೆರವಿಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಮತ್ತೊಂದೆಡೆ ವಿವಿಧ ಕಡೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.ಈಗಾಗಲೇ ಪಾಲಿಕೆ ಅಧಿಕಾರಿಗಳು ರಸ್ತೆ ಅಗಲೀಕರಣ ವೇಳೆ ಯಾವ್ಯಾವ ಕಟ್ಟಡಗಳನ್ನು ಎಷ್ಟು ಪ್ರಮಾಣದಲ್ಲಿ ತೆರವುಗೊಳಿಸಲಾಗುತ್ತಿದೆ ಎಂಬುದರ ಕುರಿತು ಸ್ಥಳೀಯರು, ವ್ಯಾಪಾರಿಗಳು ಮತ್ತು ಕಟ್ಟಡಗಳ ಮಾಲೀಕರ ಸಮ್ಮುಖದಲ್ಲಿಯೇ ಮಾರ್ಕಿಂಗ್ ಮಾಡಿದರು. ಕೆಲವರು ಒತ್ತಡ ಹಾಕಿ ಕಟ್ಟಡ ತೆರವಿಗೆ ವಿರೋಧ ವ್ಯಕ್ತಪಡಿಸಿದ್ದರು.
ನಗರದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ಆರಂಭಿಸಲಾಗಿದೆ. ಟಿಳಕವಾಡಿಯಲ್ಲಿ ಪಾಲಿಕೆ ಆಸ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಕಟ್ಟಡ ತೆರವುಗೊಳಿಸಲಾಗಿದೆ. ನ್ಯಾಯಾಲಯದಲ್ಲಿರುವ ಕಟ್ಟಡಗಳ ತೆರವು ಕೈಬಿಡಲಾಗಿದೆ. ನಿರಂತರವಾಗಿ ಕಾರ್ಯಾಚರಣೆ ನಡೆಯಲಿದೆ.| ಜಗದೀಶ ಕೆ.ಎಚ್. ಬೆಳಗಾವಿ ಪಾಲಿಕೆ ಆಯುಕ್ತ