

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ವಿವಿಧ ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಸೊಸೈಟಿಗಳಲ್ಲಿ ಬೇನಾಮಿ ಮಹಿಳಾ ಸಂಘ ಗಳ ಹೆಸರಿನಲ್ಲಿ ಕೋಟ್ಯಂತರ ರೂ ಹಣ ದುರುಪಯೋಗದ ಬಗ್ಗೆ ಠಾಣೆಗಳಲ್ಲಿ ದೂರುಗಳು ಸಲ್ಲಿಕೆಯಾಗಿದ್ದು ಸಮಗ್ರ ತನಿಖೆಗೆ ಒತ್ತಾಯಿಸಲಾಗಿದೆ.
ಚಿಂತಾಮಣಿ ಗ್ರಾಮಾಂತರ ಠಾಣೆ, ಕೆಂಚಾರ್ಲಹಳ್ಳಿ ಠಾಣೆ ಮತ್ತು ಬಟ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಬಿಜೆಪಿ ಮುಖಂಡ ತಳಗವಾರ ಪ್ರತಾಪ್, ಯನಮಲಪಾಡಿ ಸೋಮಶೇಖರ್ ಸೇರಿದಂತೆ ಹಲವರು ನೀಡಿದ ದೂರನ್ನಾಧಾರಿಸಿ ಪ್ರಕರಣಗಳು ದಾಖಲಾಗಿವೆ.
*ಎಲ್ಲೆಲ್ಲಿ ಎಷ್ಟೆಷ್ಟು ಅಕ್ರಮ?
ಚಿಂತಾಮಣಿ ತಾಲೂಕಿನ ಕುರುಬೂರು ಸಹಕಾರ ಸಂಘದಲ್ಲಿ ೨೪ ಕೋಟಿ ರೂ, ಯನಮಲಪಾಡಿ ಬೊಮ್ಮೇಪಲ್ಲಿ ಸಹಕಾರ ಸಂಘದಲ್ಲಿ ೨೩ ಕೋಟಿ ರೂ, ಅಂಕಾಲಮೊಡಗು ಸಹಕಾರ ಸಂಘದಲ್ಲಿ ೧೮ ಕೋಟಿ ರೂ, ಭೂಮಿಶೆಟ್ಟಿಹಳ್ಳಿ ಸಂಘದಲ್ಲಿ ೩೩ ಕೋಟಿ ರೂ, ನಂದನಹೊಸಹಳ್ಳಿ ಸಂಘದಲ್ಲಿ ೧೧ ಕೋಟಿ ರೂ ದುರುಪಯೋಗವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
*ಅಸಲಿಗೆ ಆರೋಪವೇನು?
ಸಾಲದ ಹಣವು ಬಡ ಗ್ರಾಮೀಣ ಮಹಿಳಾ ಸದಸ್ಯರಿಗೆ ಸೇರಿಲ್ಲ. ಪ್ರಭಾವಿಗಳು ದುರುಪಯೋಗ ಪಡಿಸಿಕೊಂಡಿದ್ದು ಮಂಜೂರಾತಿ ಆದೇಶದಲ್ಲಿರುವ ಷರತ್ತು ಬ್ಯಾಂಕಿನ ಸಾಲ ಯೋಜನೆಗಳ ನಿಯಮಾವಳಿ, ಸರ್ಕಾರದ ಆದೇಶಗಳು ಮತ್ತು ನಬಾರ್ಡ್ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆೆ. ಬೇನಾಮಿ ಸ್ವ-ಸಹಾಯ ಸಂಘದ ಸದಸ್ಯರ ಉಳಿತಾಯ ಖಾತೆಗೆ ಹಣ ಜಮಾ ನೀಡದೆ, ನಕಲಿ ಸಹಿ ಮೂಲಕ ನೇರವಾಗಿ ಹಣ ಡ್ರಾ ಮಾಡಿದ್ದು ಎಟಿಎಂ, ಮೈಕ್ರೋ ಎ.ಟಿ.ಎಂ ಮತ್ತು ಮೊಬೈಲ್ ಮೂಲಕ ಸಾಲ ವಿತರಿಸದಿರುವುದು ಅಧಿಕಾರದ ದುರುಪಯೋಗ. ಇನ್‌ಕಮ್ ಟ್ಯಾಕ್ಸ್ ಆಕ್ಟ್ ಪ್ರಕಾರ ೨೦ ಸಾವಿರಕ್ಕಿತ ಹೆಚ್ಚಿನ ಸಾಲದ ಮೊತ್ತವನ್ನು ನಗದಾಗಿ ಡ್ರಾ ಮಾಡಲು ಅವಕಾಶ ಇರುವುದಿಲ್ಲ.
* ಚಿಂತಾಮಣಿ ತಾಲೂಕಿನ ಕುರುಬೂರು, ಯನಮಲಪಾಡಿ, ಬೊಮ್ಮೆಪಲ್ಲಿ, ಅಂಕಾಲಮೊಡಗು, ಭೂಮಿಶೆಟ್ಟಿಪಲ್ಲಿ, ನಂದನಹೊಸಹಳ್ಳಿ ಸೊಸೈಟಿಗಳಲ್ಲಿ ಕಾರ್ಯದರ್ಶಿ ಮತ್ತು ಸಿಬ್ಬಂದಿ ಬೇನಾಮಿ ಮಹಿಳಾ ಸಂಘಗಳನ್ನು ಸೃಷ್ಟಿಸಿದ್ದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧಿಕಾರಿಗಳಿಂದಲೇ ಕೋಟ್ಯಂತರ ರೂ ಹಣ ದುರುಪಯೋಗವಾಗಿದೆ. ಬ್ಯಾಲಹಳ್ಳಿ ಗೋವಿಂದಗೌಡರು ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಈ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಅವ್ಯವಹಾರದ ತನಿಖೆಗಾಗಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ತಳಗವಾರ ಟಿ.ಎಸ್.ಪ್ರತಾಪ್, ದೂರುದಾರ, ಚಿಂತಾಮಣಿ