ಆಯುಷ್ ಇಲಾಖೆಯಲ್ಲಿ ಅಕ್ರಮ

Published on

ಬಳ್ಳಾರಿ: ಜಿಲ್ಲೆಯ ಆಯುಷ್ ಇಲಾಖೆಯಲ್ಲಿ ಹಣಕಾಸಿನ ದುರುಪಯೋಗ, ಖರೀದಿ ಮಾನದಂಡಗಳ ಉಲ್ಲಂಘನೆ ಆರೋಪದಡಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ಕೆ.ಶ್ರೀಪತಿ ಆದೇಶ ಹೊರಡಿಸಿದ್ದಾರೆ.

ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಸರಳಾದೇವಿ, ಆಡಳಿತಾಧಿಕಾರಿ ಶರಣಪ್ಪ ಜಿನಗ ಹಾಗೂ ಸೂಪರಿಂಟೆಂಡೆಂಟ್ ಖಲಂದರ್ ಅಮಾನತುಗೊಳಿಸಲಾಗಿದೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಆಯುಷ್ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ಭ್ರಷ್ಟಾಚಾರ ಎಸಗಿರುವ ಬಗ್ಗೆ ಇಲಾಖೆಯ ಮೇಲಧಿಕಾರಿಗಳಿಗೆ ದೂರಿನ ಬಂದ ಹಿನ್ನೆಲೆ ಕಳೆದ ಮಾ.27 ರಂದು ಇಲಾಖೆಯ ಉಪ ನಿರ್ದೇಶಕರಿಂದ ತನಿಖೆ ನಡೆಸಲಾಗಿತ್ತು. ಸೂಕ್ತವಾಗಿ ತನಿಖೆ ನಡೆಸಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಪ್ರಾಥಮಿಕ ಹಂತದಲ್ಲಿ ಕಂಡು ಬಂದಿದೆ ಎಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ವರದಿಯಲ್ಲಿ ಏನಿದೆ : 2024 -25ನೇ ಸಾಲಿನಲ್ಲಿ ಜಿಪಂ ನಿಧಿಯಡಿ ನಿಗದಿತ ಕಾರ್ಯ ವಿಧಾನ ಅನುಸರಿಸದೆ ಔಷಧಿ ಮತ್ತು ಸಲಕರಣೆ ಖರೀದಿಸಲು ಟೆಂಡರ್ ಕರೆಯಲಾಗಿದೆ. ಇಂಡೆಟ್ ಪಡೆಯದೆ ಖರೀದಿ ನಡೆದಿದೆ. ಖರೀದಿಗೆ ಹಣ ಪಾವತಿಸಲು ವೈದ್ಯರು ನೇರವಾಗಿ ಖಜಾನೆಗೆ ಬಿಲ್ ಸಲ್ಲಿಸಿದ್ದಾರೆ. ಅವರಿಗೆ ಐದು ಲಕ್ಷ ರೂ. ಮಾತ್ರ ಈ ರೀತಿ ಮಾಡಬಹುದು. ಆದರೆ, ಹೊಸಪೇಟೆಯ ಡಾ.ಗುರುದೇವ ವಾಸುದೇವ್ ರೆಡ್ಡಿ 39 ಲಕ್ಷ ರೂ. ಗಳವರೆಗೆ ಖರೀದಿ ಮಾಡಿದ್ದಾರೆ. ಅಗತ್ಯವಿಲ್ಲದ ಮತ್ತು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡಲಾಗಿದೆ. ಸ್ಕೀಂ ಚೇಂಬರ್, ಅಲ್ಮೇರ, ಪೀಠೋಪಕರಣ ಖರೀದಿಸಿ ಬಳಸಿಲ್ಲ. ಔಷಧಿಯನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚು ನೀಡಿ ಖರೀದಿಸಿದೆ. ತನಿಖೆ ವೇಳೆ ಸ್ಟಾಕ್ ಬುಕ್, ಇ ವೇ ಬಿಲ್ ನೀಡಿಲ್ಲ , ಸಾಮಗ್ರಿ ಸ್ವೀಕರಿಸಿದೆ ಹಣ ಪಾವತಿ ಮಾಡಿದೆ. ಆಯುಷ್ ಅಧಿಕಾರಿ ಅವರು 2024 -25ನೇ ಅವಧಿಯಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣ ಮತ್ತು ಸಾಮಗ್ರಿಗಳನ್ನು ಖರೀದಿ ಮಾಡಿದ್ದಾರೆ. 2023 -24ನೇ ಸಾಲಿನಲ್ಲಿ ಇದೇ ರೀತಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯಿದೆ. ಒಟ್ಟಾರೆ ಹಣಕಾಸಿನ ದುರುಪಯೋಗ, ಖರೀದಿ ಮಾನದಂಡಗಳ ಉಲ್ಲಂಘನೆ ವಂಚನೆ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net