

ಇಳಕಲ್ಲ: ಪಂಚಮಸಾಲಿ ಸಮಾಜಕ್ಕೆ 2021 ಸೆ. 15ರೊಳಗಾಗಿ 2ಎ ಮೀಸಲಾತಿ ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನಸೌಧದ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆಯಲಿ ಎಂದು ನೆನಪಿಸಲು ತಾಲೂಕು ಪಂಚಮಸಾಲಿ ಸಮಾಜದವರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಎ. ರತ್ನಮ್ಮ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಂಚಮಸಾಲಿ ಸಮಾಜದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ, ಸಮಾಜದ ರಾಷ್ಟ್ರೀಯ ಅಧ್ಯಕ್ಷ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೂಚನೆ ಮೇರೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಮಾಜದ ಪದಾಧಿಕಾರಿಗಳು, ಪ್ರವಾಸಿ ಮಂದಿರ, ಬಸ್ ನಿಲ್ದಾಣ, ಕಂಠಿ ವೃತ್ತ, ಗೊರಬಾಳ ನಾಕಾ, ಅಂಬೇಡ್ಕರ್ ವೃತ್ತ, ಡಯಟ್ ಸೇರಿ ವಿವಿಧ ಮಾರ್ಗಗಳಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು.
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಧಿವೇಶನದಲ್ಲಿ ಸೆ. 15ರೊಳಗಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇನೆ ಎಂದು ಕೊಟ್ಟು ಮಾತುಗಳನ್ನು ಇಂದಿಗೆ ಮುಗಿಯುತ್ತದೆ. ನಮ್ಮ ಸಮಾಜದ ಬೇಡಿಕೆಯನ್ನು ತಕ್ಷಣವೇ ಈಡೇರಿಸಬೇಕು. ಇಲ್ಲದಿದ್ದರೆ ಅಕ್ಬೋಬರ್ 1ರಿಂದ ಬೆಂಗಳೂರಿನಲ್ಲಿ ಮತ್ತೆ ಧರಣಿಯನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಮಹಾಂತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಐಹೊಳಿ, ಮುಖಂಡರಾದ ರುದ್ರಪ್ಪ ಸಮತರ, ಶಿವಾನಂದ ಮುಂಚಖಂಡಿ, ಎಂ.ಎಸ್.ಪಾಟೀಲ, ವಿಜಯಕುಮಾರ ಪಾಟೀಲ, ಪರಶುರಾಮ ಮೂಲಿಮನಿ, ಶಂಕರ ತೋಟದ, ಮಲ್ಲಿಕಾರ್ಜುನ ಅಗ್ನಿ, ವಿನೋದ ಬಾರಿಗಿಡದ, ಎಸ್.ಜಿ.ತೋಟದ, ಜಿ.ಎಂ.ನರಗುಂದ, ಗಂಗಾಧರ ಜಾಲಿಹಾಳ, ಕಲ್ಲನಗೌಡ ವಣಗೇರಿ, ಸುರೇಶ ಬಂಡರಗಲ್ಲ ಇತರರಿದ್ದರು.