ಆಕ್ಸಿಜನ್ ಸಮರ್ಪಕವಾಗಿ ಬಳಸಿರಿ

ILK 82
Published on

ಇಳಕಲ್ಲ (ಗ್ರಾ): ಕೋವಿಡ್ ರೋಗಿಗಳಿಗೆ ತಾತ್ಕಾಲಿಕ ಆಕ್ಸಿಜನ್ ಸೌಲಭ್ಯ ಒದಗಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ಜಾಯಮಾನ ನನ್ನದಲ್ಲ. ಆಕ್ಸಿಜನ್ ಸೌಲಭ್ಯ ಪ್ರಾರಂಭಗೊಂಡರೆ ಅದು ಕೋವಿಡ್ ಇರುವವರೆಗೂ ನಿರಂತರವಾಗಿರಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಗರದ ಗೌಳೇರಗುಡಿಯಲ್ಲಿನ 30 ಬೆಡ್‌ಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೋವಿಡ್ ರೋಗಿಗಳಿಗೆ ಅಗತ್ಯವಾಗಿ ಬೇಕಾಗಿರುವ ಆಕ್ಸಿಜನ್ ಸೌಲಭ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ನಂತರ ಮಾತನಾಡಿದರು.

ಒಬ್ಬ ರೋಗಿಗೆ ಒಂದು ದಿನಕ್ಕೆ ಒಂದು ಜಂಬೋ ಸಿಲಿಂಡರ್ ಬೇಕಾಗುತ್ತದೆ. ನಮ್ಮ ಆಸ್ಪತ್ರೆಯಲ್ಲಿ 30 ಬೆಡ್‌ಗಳಿರುವುದರಿಂದ ಪ್ರತಿದಿನ 30 ಜಂಬೋ ಸಿಲಿಂಡರ್ ಅವಶ್ಯಕತೆ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚೇತನಾ ಶ್ಯಾವಿ ಹೇಳಿದರು. ಅದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಇಳಕಲ್ಲ ಹಾಗೂ ಹುನಗುಂದದ ಸಾರ್ವಜನಿಕ ಆಸ್ಪತ್ರೆಗಳಿಗೆ 60 ಜಂಬೋ ಸಿಲಿಂಡರ್ ಒದಗಿಸುವ ವ್ಯವಸ್ಥೆ ನನ್ನ ಸ್ವಂತ ಖರ್ಚಿನಿಂದ ಮಾಡುತ್ತಿದ್ದೇನೆ. ಭಾನುವಾರ ಸಂಜೆ ವೇಳೆಗೆ ಆಕ್ಸಿಜನ್ ಲಾರಿ ಇಳಕಲ್ಲ ನಗರಕ್ಕೆ ಬರುತ್ತಿದ್ದು, ನಿಮ್ಮ ಎಸ್ಟಿಮೇಟ್ ಪ್ರಕಾರ 12 ರಿಂದ 14 ದಿನಗಳ ವರೆಗೆ ಆಕ್ಸಿಜನ್ ಸೌಲಭ್ಯ ನಿರಂತರವಾಗಿ ಸಾಗುತ್ತದೆ. ದಯವಿಟ್ಟು ಆಕ್ಸಿಜನ್ ಸಮರ್ಪಕವಾಗಿ ಬಳಸಿ ರೋಗಿಗಳ ಸೇವೆ ಮಾಡಬೇಕು. 12 ದಿನಗಳ ನಂತರ ಇನ್ನು ಒಂದು ಲಾರಿ ತರಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಸದಸ್ಯರಾದ ಸುಗೂರೇಶ ನಾಗಲೋಟಿ, ಚಂದ್ರಶೇಖರ ಏಕಬೋಟೆ, ಪೌರಾಯುಕ್ತ ಜಗದೀಶ ಹುಲಗೆಜ್ಜೆ, ನಗರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಬಿ. ಪಾಟೀಲ, ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net