

ಇಳಕಲ್ಲ: ಮಹಾಮಾರಿ ಕರೊನಾ ತಡೆಗೆ ಮೇ 10 ರಿಂದ ಕಠಿಣ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ನಗರದ ಮೇನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಜನರು, ಪರಸ್ಪರ ಅಂತರ ಮರೆತು ಮುಗಿಬಿದ್ದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಬೆಚ್ಚಿಬೀಳಿಸುವಂತಿತ್ತು.
ಇಷ್ಟಾದರೂ ಅಂಗಡಿ ಮಾಲೀಕರು ಜನರನ್ನು ನಿಯಂತ್ರಿಸಲು ಮುಂದಾಗಲಿಲ್ಲ. ಇನ್ನೂ ತಳ್ಳು ಗಾಡಿಯಲ್ಲಿ ಕಾಯಿಪಲ್ಲೆ, ಹಣ್ಣುಗಳನ್ನು ಮಾರುವ ವ್ಯವಸ್ಥೆ ಕಲ್ಪಿಸಿದರೂ ಅವುಗಳನ್ನು ಖರೀದಿಸಲು ಮುಗಿಬಿದ್ದಿದ್ದರು.
ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದೆಲ್ಲೆಡೆ ಜನವೋ ಜನ, ಬೈಕ್‌ಗಳ ಸಾಲು ಸಾಲಾಗಿ ಕಾಣುತ್ತಿದ್ದವು. ಈ ಮಧ್ಯೆ ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ಗುಂಪು ಗುಂಪಾಗಿ ಸೇರ ಬೇಡಿರಿ ಎಂದು ಹೇಳಿದರೂ ಅವರ ಮಾತಿಗೂ ಜನ ಕಿವಿಗೊಡಲಿಲ್ಲ. ನಗರದಲ್ಲಿ ದಿನದಿಂದ ದಿನಕ್ಕೆ ಕರೊನಾ ಸಂಖ್ಯೆಗಳು ಹೆಚ್ಚಾಗುತ್ತಿದ್ದರೂ ಇಲ್ಲಿ ನೋಡಿದರೆ ಕರೊನಾ ಇಲ್ಲವೇನೋ ಎನ್ನುವಂತ್ತಿತ್ತು.
ಈಗಾಗಲೇ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಪ್ರಾರಂಭವಾಗಿದ್ದು, ನಗರದಲ್ಲಿನ ಅನೇಕ ಕರೊನಾ ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಕ್ಕದಲ್ಲೇ ಸೋಂಕಿತರಿದ್ದರೂ ಗುರುತಿಸಲಾಗದ ಪರಿಸ್ಥಿತಿ ಉದ್ಭವವಾಗಿದೆ. ತಾಲೂಕಾಡಳಿತ, ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು ತಿಳಿ ಹೇಳಿದರೂ ಜನರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗದಿರುವುದು ನೋವು ತಂದಿದೆ ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಿದ್ದಾರೆ.