

ಇಳಕಲ್ಲ(ಗ್ರಾ): ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 50 ರ ಹಿರೇಕೊಡಗಲಿ ಗ್ರಾಮದ ಬಳಿ ಮಂಗಳವಾರ ಬೆಳಗಿನಜಾವ ನಡೆದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.
ಬೀದರ್ ಜಿಲ್ಲೆ ಬಸವ ಕಲ್ಯಾಣ ತಾಲೂಕಿನ ಕೋತಬಿ ಗ್ರಾಮದ ಸುವರ್ಣ ಮಲ್ಲಿಕಾರ್ಜುನ ಕಮಟಾಣೆ (32), ಬಸವಣೆಪ್ಪ ಕಮಟಾಣೆ (75), ಬಸವಣೆಪ್ಪ ಅವರ ಹೆಣ್ಣು ಮೊಮ್ಮಗಳು ಹಿಪ್ಪರಗಿ ಗ್ರಾಮದ ಸವಿತಾ ಜಗನ್ನಾಥ ಕಡ್ಲಿಬರಶೆಟ್ಟಿ(20) ಮೃತ ದುರ್ದೈವಿಗಳು. ಸುವರ್ಣ ಕಮಟಾಣೆ ಅವರ ಮಕ್ಕಳಾದ ಜಾಹ್ನವಿ (15), ಯಶ್ (10), ಸಹೋದರ ಕಾರು ಚಾಲಕ ಪ್ರಭು ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ:
ಕರೊನಾ ವೈರಸ್ ಭೀತಿಯಿಂದಾಗಿ ಬೆಂಗಳೂರಿನಿಂದ ತಮ್ಮ ಊರಿನತ್ತ ಒಂದೇ ಕುಟುಂಬ ಆರು ಜನರು ಪ್ರಯಾಣ ಬೆಳೆಸಿದ್ದರು. ಚಾಲಕ ಪ್ರಭು ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಕಲ್ಲು ಗುಂಡಿಗಳಲ್ಲಿ ಬಿದ್ದಿದೆ. ಕಾರು ಬಿದ್ದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ. ಗಾಯಗೊಂಡಿರುವ ಮೂವರನ್ನು ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.
ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಬಿ.ವಿ.ನ್ಯಾಮಗೌಡ ತನಿಖೆ ನಡೆಸಿದ್ದಾರೆ. ಸಿಪಿಐ ಅಯ್ಯನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
EndFragment