ವ್ಯಕ್ತಿ ನಿಗೂಢ ಸಾವು

Crime
Published on

ಇಳಕಲ್ಲ(ಗ್ರಾ): ಪಟ್ಟಣದ ಹುಚನೂರ ರಸ್ತೆಯ ಮಧ್ಯಭಾಗದಲ್ಲಿ ನಿಗೂಢವಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು ಬುಧವಾರ ಬೆಳಗ್ಗೆ ವಾಯು ವಿಹಾರಕ್ಕೆ ಹೊರಟ ಜನರು ವ್ಯಕ್ತಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ.

ಬಾಗಲಕೋಟ ಜಿಲ್ಲಾ ಡಿಸಿಸಿ ಬ್ಯಾಂಕ್‌ನ ಇಳಕಲ್ಲ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ದೊಡ್ಡಪ್ಪ ಬಿರಾದಾರ (47) ಮೃತ ವ್ಯಕ್ತಿ. ಮೃತ ವ್ಯಕ್ತಿ ಮೂಲತ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊನ್ನಾಳ ಗ್ರಾಮದವನಾಗಿದ್ದು ಕಳೆದ 15 ವರ್ಷಗಳ ಹಿಂದೆ ಗ್ರಾನೈಟ್ ಕ್ವಾರಿಯಲ್ಲಿ ದುಡಿಯಲೆಂದು ಇಳಕಲ್ಲಗೆ ಬಂದಿದ್ದನು. ಹೆಚ್ಚಾಗಿ ಚಿತ್ತರಗಿ ಶ್ರೀಮಠದಲ್ಲಿಯೇ ಇರುತ್ತಿದ್ದರಿಂದ ಅಲ್ಲಿಯೇ ಇರುವ ಡಿಸಿಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಜತೆಗೆ ಪಿಗ್ಮಿ ಸಂಗ್ರಹ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಡಿವೈಎಸ್‌ಪಿ ನಂದರೆಡ್ಡಿ, ಹುನಗುಂದ ಸಿಪಿಐ ಅಯ್ಯನಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಳಕಲ್ಲ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರಮೇಶ ಜಲಗೇರಿ ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net