

ಇಳಕಲ್ಲ: ಸಾರ್ವಜನಿಕರು ಕರೊನಾ ವೈರಸ್ ಸೋಂಕಿನ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಇದನ್ನು ತಡೆಯಲು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಕೈಗೊಂಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ 6 ಹಾಸಿಗೆಗಳ ಪ್ರತ್ಯೇಕ ಐಸೋಲೇಷನ್ ವಾರ್ಡ್‌ಗೆ ಭಾನವಾರ ಭೇಟಿ ನೀಡಿ ಆರೋಗ್ಯ ಇಲಾಖೆ ಕೈಗೊಂಡ ಮುಂಜಾಗ್ರತೆ ಕ್ರಮಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದೇಶ ಪ್ರವಾಸಕ್ಕೆ ಹೋಗಿ ಬಂದಂತಹ ಕುಟುಂಬ ಸದಸ್ಯರ ಮಾಹಿತಿ ಪಡೆದು ಅವರ ಮೇಲೆ ನಿಗಾ ವಹಿಸುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಗುಗ್ಗಲಮರಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬರುವ ಎಲ್ಲ ವಾಹನಗಳ ತಪಾಸಣೆಗಾಗಿ ಚೆಕ್ ಪೋಸ್ಟ್ ಅನ್ನು ಜಿಲ್ಲಾಡಳಿತ ಆರಂಭಿಸಿದ್ದು, ವಾಹನದಲ್ಲಿ ಬರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದರು.
ಮುಖ್ಯ ವೈದ್ಯಾಧಿಕಾರಿ ಡಾ.ನವೀನಕುಮಾರ ಬಿರಾದಾರ ಮಾತನಾಡಿ, ಆಸ್ಪತ್ರೆಯಲ್ಲಿ 6 ಬೆಡ್‌ಗಳ ಐಸೋಲೇಷನ್ ವಾರ್ಡ್ ಪ್ರಾರಂಭಿಸಲಾಗಿದೆ. ಚಿಕಿತ್ಸೆಗಾಗಿ ಅಗತ್ಯ ಔಷಧಗಳನ್ನು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.
ನೆಗಡಿ, ಕೆಮ್ಮು, ಶೀತ ಎಂದು ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಕೈ, ಕಾಲು ತೊಳೆದುಕೊಂಡು ಆಹಾರ ಸೇವಿಸಬೇಕು. ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹಾಂತಗೌಡ ಪಾಟೀಲ, ಮುಖಂಡರಾದ ಡಾ.ಮಹಾಂತೇಶ ಕಡಪಟ್ಟಿ, ಶಿವನಗೌಡ ಅಗಸಿಮುಂದಿನ, ಉಮೇಶ ಕೊಂಗಾರಿ, ಬಿ.ಎನ್. ನಾಗನಗೌಡರ, ಮಲ್ಲು ಚೂರಿ, ಅಜ್ಜಪ್ಪಗೌಡ ನಾಡಗೌಡರ ಸೇರಿ ಇತರರು ಇದ್ದರು.
ವಿದೇಶದಿಂದ ಬಂದವರ ಮೇಲೆ ನಿಗಾ
ಇಳಕಲ್ಲದ ಹೊಸಪೇಟೆ ಓಣಿಯ ಕುಟುಂಬದ ಇಬ್ಬರು ಸೌದಿ ಅರೇಬಿಯಾದ (ಉಮ್ರಾ) ಮೆಕ್ಕಾಕ್ಕೆ ಹೋಗಿ ಗುರುವಾರ ಇಳಕಲ್ಲ ನಗರಕ್ಕೆ ಆಗಮಿಸಿದ ಕಾರಣ ಅವರನ್ನು 14 ದಿನ ಮನೆಯಿಂದ ಹೊರ ಬರದಂತೆ ಹಾಗೂ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರುವಂತೆ ಸೂಚನೆ ನೀಡಲಾಗಿದೆ. ವಿದೇಶದಿಂದ ನಗರಕ್ಕೆ ಆಗಮಿಸುವವರ ಬಗ್ಗೆ ನಿಗಾ ವಹಿಸಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನವೀನಕುಮಾರ ಬಿರಾದಾರ ತಿಳಿಸಿದರು.
ಸಿನಿಮಾ ಮಂದಿರ ಬಂದ್
ರಾಜ್ಯ ಸರ್ಕಾರದ ನಿರ್ದೇಶನದಂತೆ ಇಳಕಲ್ಲ ನಗರದಲ್ಲಿ ನಾಲ್ಕು ಸಿನಿಮಾ ಮಂದಿರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಾಗಿ ಮಾಸ್ಕ್, ಕರವಸ ಮುಖಕ್ಕೆ ಕಟ್ಟಿಕೊಂಡು ತಿರುಗಾಡುವ ದೃಶ್ಯಗಳು ಕಂಡು ಬಂದವು. ಗುಂಪು ಗುಂಪಾಗಿ ಮಾತನಾಡುವ ದೃಶ್ಯಗಳು ಕಡಿಮೆ ಕಂಡು ಬಂದವು. ವ್ಯಾಪಾರ ವಹಿವಾಟು ಮೇಲೆ ಕರೊನಾ ಪರಿಣಾಮ ಬೀರಿದೆ.
EndFragment