

ಇಳಕಲ್ಲ: ಕರೊನಾ ವೈರಸ್ ಸೋಂಕು ತಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್‌ದ ಸೂಚನೆಗಳನ್ನು ಇಳಕಲ್ಲದ ಜನತೆ ಅನುಸರಿಸುತ್ತಿದ್ದಾರೆ.
ಆರಂಭದಲ್ಲಿ ಕೆಲವರು ಸುಮ್ಮುಸುಮ್ಮನೆ ರಸ್ತೆಗೆ ಇಳಿದು ಪೊಲೀಸರಿಗೆ ಕಿರಿಕಿರಿಯನ್ನುಂಟು ಮಾಡಿದ್ದರು. ಅಂಥವರಿಗೆ ಪೊಲೀಸರು ಕೂಡ ಬುದ್ಧಿ ಮಾತು ಹೇಳಿದ್ದರು. ಕೇಳದವರಿಗೆ ಲಾಠಿ ರುಚಿ ತೋರಿಸಿದ್ದರು. ಸದ್ಯ ನಗರದಲ್ಲಿ ಸಂಚರಿಸುತ್ತಿರುವವರ ಸಂಖ್ಯೆ ಬಹಳಷ್ಟು ವಿರಳವಾಗಿದೆ. ಬಹುತೇಕ ಪ್ರಮುಖ ಬೀದಿಗಳು ಭಣಭಣ ಎನ್ನುತ್ತಿವೆ. ಸಣ್ಣ ಸಣ್ಣ ಓಣಿಗಳಲ್ಲಿ ಅಲ್ಲಿಯೊಬ್ಬರು, ಇಲ್ಲಿಯೊಬ್ಬರು ಕಾಣಬಹುದು. ಒಂದು ವೇಳೆ ರಸ್ತೆಗೆ ಇಳಿದರೆ ಮುಖದಲ್ಲಿ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ ಮುಖದಲ್ಲಿ ಕಾಣುತ್ತೇವೆ.
ವಾರದ ಸಂತೆ ದಿನಗಳಾದ ಸೋಮವಾರ ಹಾಗೂ ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆವರೆಗೆ ತರಕಾರಿ, ದಿನಸಿ ಖರೀದಿಸಲು ತಾಲೂಕು ಆಡಳಿತ, ನಗರಸಭೆ, ಪೊಲೀಸ್ ಇಲಾಖೆ ಅಧಿಕಾರಿಗಳು ಅವಕಾಶ ಮಾಡಿರುವುದರಿಂದ ಜನರಲ್ಲಿ ಸ್ವಲ್ಪ ನೆಮ್ಮದಿಯನ್ನು ತಂದಿದೆ. ದಿನಸಿ, ತರಕಾರಿ ತರಲು, ಬ್ಯಾಂಕ್‌ಗೆ, ಔಷಧ ಅಂಗಡಿಗೆ ಬಂದವರ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಅಥವಾ ಕರವಸ ಹಾಕಿಕೊಂಡು ಬರುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ರೂಢಿಯಾಗಿದೆ.
ಲಾಕ್‌ಡೌನ್ ಹಿನ್ನೆಲೆ ದಿನಸಿ, ತರಕಾರಿ ಬೆಲೆ ಹೆಚ್ಚಳವಾಗಿದೆ ಎಂದು ಕೆಲವರು ಆರೋಪವಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ವೇದವ್ಯಾಸ ಮುತಾಲಿಕ, ಲಾಕ್‌ಡೌನ್ ನೆಪದಲ್ಲಿ ಬೆಲೆಗಳನ್ನು ಹೆಚ್ಚಳ ಮಾಡುವಂತಿಲ್ಲ. ಒಂದು ವೇಳೆ ಅಂತಹ ದೂರುಗಳು ಬಂದಲ್ಲಿ ಸಂಬಂಧಪಟ್ಟ ವ್ಯಾಪಾರಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಲಾಕ್‌ಡೌನ್ ಜಾರಿಗೆ ಬಂದು 7ನೇ ದಿನವಾಗಿದ್ದು, ನಗರ ಸಂಪೂರ್ಣ ಸ್ತಬ್ಧವಾಗಿದೆ. ಇಳಕಲ್ಲ ನಗರ ಪಿಎಸ್‌ಐ ಆರ್.ವೈ. ಜಲಗೇರಿ, ಗ್ರಾಮೀಣ ಪಿಎಸ್‌ಐ ಬಿ.ವಿ. ನ್ಯಾಮಗೌಡ ಹಾಗೂ ಸಿಬ್ಬಂದಿ ಕಟ್ಟುನಿಟ್ಟಾಗಿ ಜಾರಿಗೆ ತಂದಿರುವ ಕಾನೂನುಗಳಿಂದ ಜನರು ರಸ್ತೆಗೆ ಇಳಿಯುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ.
ಕಟ್ಟುನಿಟ್ಟಾಗಿ ತಪಾಸಣೆ ಮಾಡಿ
ಇಳಕಲ್ಲ ತಾಲೂಕಿನ ಗುಗ್ಗಲಮರಿ ಕರೊನಾ ಚೆಕ್‌ಪೋಸ್ಟ್‌ಗೆ ಜಿಪಂ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು. ಈ ಮಾರ್ಗವಾಗಿ ಆಗಮಿಸುವ ಪ್ರತಿಯೊಬ್ಬರನ್ನು ಕಟ್ಟುನಿಟ್ಟಾಗಿ, ಸರಿಯಾಗಿ ತಪಾಸಣೆ ನಡೆಸಲು ಅಲ್ಲಿದ್ದ ವೈದ್ಯರು, ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದರು. ನಂತರ ಹಿರೇಕೊಡಗಲಿ ಗ್ರಾಪಂಗೆ ಭೇಟಿ ನೀಡಿದರು. ಅಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕರೊನಾ ತಡೆಗೆ ಕೈಗೊಂಡಿರುವ ಮಾಹಿತಿ ಪಡೆದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ
ಚಿಕ್ಕಕೊಡಗಲಿ ಗ್ರಾಪಂ ವ್ಯಾಪ್ತಿಯ ಚಿಕ್ಕಕೊಡಗಲಿ, ಚಿಕ್ಕಕೊಡಗಲಿ ಎಲ್.ಟಿ. 1 ಮತ್ತು ಎಲ್.ಟಿ. 2, ಸಂಕ್ಲಾಪುರ, ಹಿರೇಉಪನಾಳ, ಗೋನಾಳ ಎಸ್.ಬಿ. ಗ್ರಾಮಗಳಲ್ಲಿ ಕರೊನಾ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು. ಕಾರ್ಯದರ್ಶಿ ಆದಪ್ಪ ಮೇಳಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಪಂ ಅಧ್ಯಕ್ಷೆ ಮಂಗಳವ್ವ ರಾಠೋಡ, ಪಿಡಿಒ ಗೋಪಾಲಕೃಷ್ಣ ನಾಯಕ, ಆಯಾ ಗ್ರಾಮದ ಗ್ರಾಪಂ ಸದಸ್ಯರು ಭಾಗಿಯಾಗಿದ್ದರು.
EndFragment