ಜನ ಸಂಚಾರವಿಲ್ಲದೆ ಭಣಗುಟ್ಟಿದ ರಸ್ತೆಗಳು

ILK 241
Published on

ಇಳಕಲ್ಲ(ಗ್ರಾ): ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ವಾರಾಂತ್ಯದ ಕರ್ಫ್ಯೂದಿಂದಾಗಿ ಇಲ್ಲಿಯ ಎಲ್ಲ ಪ್ರಮುಖ ರಸ್ತೆಗಳು ಜನಸಂಚಾರ ಇಲ್ಲದೆ ಭಣಗುಟ್ಟಿದವು.

ಪೊಲೀಸ್ ಮತ್ತು ನಗರಸಭೆ ಸಿಬ್ಬಂದಿ ಬೆಳಗ್ಗೆ 6 ಗಂಟೆಯಿಂದ 9 ಗಂಟೆವರೆಗೆ ಅವಶ್ಯಕ ವಸ್ತುಗಳನ್ನು ಖರೀದಿಸಲು ಮತ್ತು ವ್ಯಾಪಾರ ಮಾಡಲು ಐದು ಪ್ರಮುಖ ಸ್ಥಳಗಳನ್ನು ಗುರುತಿಸಿದ್ದರು. ಎಪಿಎಂಸಿ ಮಾರುಕಟ್ಟೆ, ಬಸ್ ನಿಲ್ದಾಣ, ಬಸವನಗರ ಆಂಜನೇಯ ದೇವಸ್ಥಾನ, ಬನ್ನಿಕಟ್ಟಿ ಮತ್ತು ಕೆಇಬಿ ಹತ್ತಿರದ ಈಶ್ವರ ಗುಡಿಯ ಪಕ್ಕದಲ್ಲಿ ವ್ಯಾಪಾರ ಜರುಗಿತು.

ತಹಸೀಲ್ದಾರ್ ನಿಂಗಪ್ಪ ಬಿರಾದಾರ ಬೆಳಗ್ಗೆ 10ರ ನಂತರ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳಿಗೆ ಕಡ್ಡಾಯವಾಗಿ ಬೀಗ ಹಾಕಿಸಿ ದಂಡ ವಿಧಿಸಿದರು.
ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಬಿ. ಪಾಟೀಲ, ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜೆ ಮತ್ತು ಅವರ ಸಿಬ್ಬಂದಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುವರರಿಗೆ ದಂಡ ವಿಧಿಸಿದರು.

ಇಂದಿನಿಂದ ಮದುವೆಗಳು ಶುರು
ಮದುವೆ ಸೀಜನ್ ಹಿನ್ನೆಲೆಯಲ್ಲಿ ಮೊದಲೇ ನಿಗದಿತವಾಗಿರುವ ಮದುವೆಗಳು ಭಾನುವಾರದಿಂದ ಆರಂಭಗೊಳ್ಳಲಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಎಚ್ಚರ ವಹಿಸುವುದು ತುಂಬಾ ಅಗತ್ಯವಿದೆ. 2020 ರಲ್ಲಿ ಕರೊನಾ ಮೊದಲ ಅಲೆಯೂ ಇಳಕಲ್ಲ ನಗರದಲ್ಲಿ ಮದುವೆಯಿಂದಲೇ ಸಾಕಷ್ಟು ಹರಡಿತ್ತು. ಹೀಗಾಗಿ ಭಾನುವಾರದಿಂದ ಆರಂಭಗೊಳ್ಳುವ ಮದುವೆಗಳಿಗೆ ಸರ್ಕಾರ ನಿಗದಿಗೊಳಿಸಿದ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರುವ ಮೂಲಕ ಕರೊನಾ ಹರಡದಂತೆ ನೋಡಿಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net