

ಮೈಸೂರು: ಮೈಸೂರು ನಗರದಿಂದ ದೇಶದ ಎಲ್ಲ ಪ್ರಮುಖ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಮುಖ್ಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿದ ಅವರು ಈ ವಿಷಯ ತಿಳಿಸಿದರು.
ಮೈಸೂರು ರೈಲು ನಿಲ್ದಾಣದಿಂದ ದೇಶದ ಎಲ್ಲ ಪ್ರಮುಖ ನಗರಗಳಿಗೆ ವೇಗವಾಗಿ ಸಂಪರ್ಕ ಕಲ್ಪಿಸುವ ಯೋಜನೆ ಕುರಿತು ಶೀಘ್ರದಲ್ಲೇ ರೈಲ್ವೆ ಸಚಿವರ ಜತೆ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದರು.
ಸಾಂಸ್ಕೃತಿಕ ನಗರಿ ಮೈಸೂರು ಉದ್ಯಮ ಕ್ಷೇತ್ರ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನದೆ ಆದ ಸ್ಥಾನವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ದೇಶದ ಮುಖ್ಯ ನಗರಗಳಿಗೆ ವೇಗವಾಗಿ ಸಂಪರ್ಕ ಸಾಧನೆ ಮಾಡಿದರೆ, ಈ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ದೊರೆಯುವುದಲ್ಲದೇ ಸ್ಥಳೀಯ ಆರ್ಥಿಕತೆಯೂ ಏರಿಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದವರೇ ಆದ ವಿ. ಸೋಮಣ್ಣ ರೈಲು ಖಾತೆಯನ್ನು ಹೊಂದಿದ್ದಾರೆ. ಅವರನ್ನು ಭೇಟಿಯಾಗಿ ಈ ವಿಷಯವನ್ನು ಪ್ರಸ್ತಾಪಿಸಿ ಮುಂದಿನ ಕ್ರಮಗಳನ್ನು ಬಹಳ ಬೇಗೆನೆ ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಮೈಸೂರು ನಗರದ ಪಾರಂಪರಿಕ ಗುರುತನ್ನು ಉಳಿಸುವಲ್ಲಿ ನಮ್ಮ ಹಿಂದಿನ ರಾಜರು, ಪೂರ್ವಜರು ಬಿಟ್ಟು ಹೋಗಿರುವ ಹಾದಿ ನಮಗೆ ಸ್ಫೂರ್ತಿದಾಯಕವಾಗಿದೆ. ಅವರ ಮಾದರಿಯನ್ನು ಅನುಸರಣೆ ಮಾಡಿ, ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುತ್ತದೆ. ಸದ್ಯದಲ್ಲೇ ಕೊಡಗು, ಮೈಸೂರು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ‘ದಿಶಾ’ ಸಭೆ ನಡೆಸಲಾಗುತ್ತದೆ. ಅಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ ಮೈಸೂರು ರೈಲು ನಿಲ್ದಾಣವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಎಲ್ಲ ನೆರವು ನೀಡುವುದಾಗಿ ತಿಳಿಸಿದರು.