

ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಕ್ಷೇತ್ರಗಳಿಗೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾರಾವ್ ಅವರು ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.
ಕಳೆದ ಏಪ್ರಿಲ್ 7ರಂದು ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಆಲಿಕಲ್ಲು ಮಳೆೆಯಿಂದ ಬೇಸಿಗೆ ಹಂಗಾಮಿನಲ್ಲಿ ಬೆಳೆಯಲಾದ ಭತ್ತ ಮತ್ತು ಸಜ್ಜೆ ಬೆಳೆಗಳು ಹಾನಿಯಾಗಿರುವುದು ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು, ಶಹಾಪೂರ ಮತ್ತು ವಡಗೇರಾ ತಾಲೂಕಿನ ಐಕೂರ್, ಅನಕಸೂಗೂರು, ಕುರಿಹಾಳ ಮತ್ತು ತುಮಕೂರು ಗ್ರಾಮಗಳಲ್ಲಿ ಬೆಳೆಹಾನಿಯಾದ ಬೆಳೆ ಕ್ಷೇತ್ರಕ್ಕೆ ಭೇಟಿ ನೀಡಿ ರೈತರು ಹಾಗೂ ಅಧಿಕಾರಿಗಳಿಂದ ಬೆಳೆ ಹಾನಿಯಾದ ಬಗ್ಗೆ ವಿವರವಾದ ಮಾಹಿತಿ ಪಡೆದರು. ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ತಕ್ಷಣ ವರದಿ ಸಲ್ಲಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶ ಅಂಕಲಗಿ ಮತ್ತು ಶಹಾಪುರ ಸಹಾಯಕ ಕೃಷಿ ನಿರ್ದೇಶಕರಾದ ಗೌತಮ ಅವರು ಹಾಜರಿದ್ದರು.