ವಿದ್ಯಾರ್ಥಿಗಳಿಗೆ ಚೇತೋಹಾರಿ ಪಾಠ,ನಗಿಸುತ್ತಲೇ ವಿಜ್ಞಾನದ ವಿಸ್ಮಯ ತೆರೆದಿಟ್ಟ ಪ್ರೊ. ಎಸ್.ಎಂ. ಶಿವಪ್ರಸಾದ

IMG-20240206-WA0012.jpg
Published on

ಧಾರವಾಡ: ಬರೀಗಣ್ಣಿಗೆ ಎಷ್ಟು ನಕ್ಷತ್ರಗಳು ಕಾಣುತ್ತವೆ, ಟೆಲಿಸ್ಕೋಪ್‌ನಿಂದ ನೋಡಿದಾಗ ಎಷ್ಟು ಗೋಚರಿಸುತ್ತವೆ, ಭೂಮಿ ಹೊರತುಪಡಿಸಿ ಮತ್ತೆ ಯಾವ ಜಾಗದಲ್ಲಿ ನೀರು ಇದೆ? ಹೀಗೆ ಅನೇಕ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುತ್ತಲೇ ವಿಜ್ಞಾನದ ವಿಸ್ಮಯಗಳೊಂದಿಗೆ ವಿದ್ಯಾರ್ಥಿಗಳಿಗೆ ಚೇತೋಹಾರಿ ಪಾಠ ಮಾಡಿದವರು ಧಾರವಾಡ ಐಐಟಿ ಡೀನ್ ಪ್ರೊ. ಎಸ್.ಎಂ. ಶಿವಪ್ರಸಾದ ಅವರು.

ಇಲ್ಲಿಯ ಹಳಿಯಾಳ ರಸ್ತೆ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ವಿಜಯವಾಣಿ ಎಜುಕೇಷನ್ ಎಕ್ಸ್‌ಪೋದ ಎರಡನೇ ದಿನ ಮಂಗಳವಾರ ಮೊದಲ ಗೋಷ್ಠಿಯಲ್ಲಿ 21ನೇ ಶತಮಾನದ ಶಿಕ್ಷಣದ ಬೇಡಿಕೆಗಳು ಮತ್ತು ಅವುಗಳ ಪೂರೈಕೆಗಳ ಕುರಿತು ಅವರು ಮಾತನಾಡಿದರು.


ಈ ಭೂಮಿಯು ಇಂಗ್ಲಿಷ್‌ನ ಎಲ್‌ಎಡಬ್ಲುಎಸ್ (ಲಾ) ಒಳಗೊಂಡಿದೆ. ಎಲ್- ರ್ಟೈಲ್ ಲ್ಯಾಂಡ್, ಎ- ಅಟಮಾಸ್ಪಿಯರ್, ಡಬ್ಲೂ- ವಾಟರ್ ಹಾಗೂ ಎಸ್- ಸನ್‌ಲೈಟ್ ಇವು ಇಲ್ಲಿ ಜೀವಿಗಳು ಇರಲು ಬೇಕಾದ ಅಂಶಗಳು. ಈ ಜಗತ್ತಿನಲ್ಲಿ ಏನೇ ಕಂಡು ಹಿಡಿದಿದ್ದರೂ, ಸಂಶೋಧನೆ ಮಾಡಿದ್ದರೂ ಅದು ಮನುಷ್ಯರೇ, ಯಾವುದೇ ಪ್ರಾಣಿ, ಪಕ್ಷಿಗಳಿಗೆ ಈ ಶಕ್ತಿ ಇಲ್ಲ. ಹಾಗಾಗಿ ಮನುಷ್ಯನಾಗಿ ಹುಟ್ಟಿದ್ದೇ ಪುಣ್ಯ ಎಂದು ನಾವು ಅಂದುಕೊಳ್ಳಬೇಕು.

ಇದೆಲ್ಲವನ್ನು ನೋಡಿದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು ಎಂಬುದು ಸಾಬೀತಾಗುತ್ತದೆ. ಜೀವನದಲ್ಲಿ ಸ್ಪಷ್ಟತೆ, ಪ್ರಾಮಾಣಿಕತೆ, ಧೈರ್ಯ ಇದ್ದರೆ ಯಾವುದೇ ಅಸಾಧ್ಯ ಎಂಬುದಿಲ್ಲ ಎಂದು ಹೇಳಿದರು.

ಪಾಸ್ ಆಗಲೇಬೇಕು ಎಂಬ ಒತ್ತಡ ಇಟ್ಟುಕೊಳ್ಳಬೇಡಿ, ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಅನುತ್ತೀರ್ಣ ಆಗಬಾರದು. ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಶಾಲೆಯ ಪರೀಕ್ಷೆಗಳಲ್ಲಿ ಫೇಲ್ ಆದವರೇ ದೊಡ್ಡ ಸಾಧನೆ ಮಾಡಿದ್ದಾರೆ. ಪ್ರತಿಯೊಬ್ಬರೂ ಸಮನಾದ ಬುದ್ಧಿವಂತಿಕೆ ಹೊಂದಿದ್ದಾರೆ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಜ್ಞಾನ ಗಳಿಸಿಕೊಂಡರೆ ಅದೇ ಶಿಕ್ಷಣ ಎಂದರು.

ಜ್ಞಾನದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಜಗತ್ತು ಮುಂದಿನ ದಿನಗಳಲ್ಲಿ ಬಹಳ ಬದಲಾವಣೆ ಆಗುತ್ತದೆ. ಅದಕ್ಕೆ ತಕ್ಕಂತೆ ನಾವು ಚಾಕಚಕ್ಯತೆ ಬೆಳೆಸಿಕೊಳ್ಳಬೇಕು. ನ್ಯಾನೋಟೆಕ್ನಾಲಜಿ, ಬಯೋಟೆಕ್ನಾಲಜಿ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈ ಮೂರು ಕ್ಷೇತ್ರಗಳು ಭವಿಷ್ಯವನ್ನು ಆಳಲಿವೆ. ಈಗಿನಿಂದಲೇ ಕೆಲಸ ಆರಂಭಿಸಿ ಎಂದು ಸಲಹೆ ನೀಡಿದರು.

ಪರೀಕ್ಷೆಯಲ್ಲಿ ಫೇಲ್ ಆಗುವುದು ತಪ್ಪಲ್ಲ, ಅದರಿಂದ ಪಾಠ ಕಲಿಯದಿದ್ದರೆ ಅದು ತಪ್ಪು. ಶಾಲೆಯಲ್ಲಿ ನಿಮ್ಮ ಆಸಕ್ತಿಗೆ ತಕ್ಕ ಪಾಠ ಸಿಗದಿದ್ದರೆ ಹೊರಗೆ ಸಾಕಷ್ಟು ಕಲಿಯಬಹುದು. ಅದನ್ನು ಬಳಸಿಕೊಂಡು ಆಸಕ್ತಿಗೆ ನೀರು ಎರೆಯಿರಿ ಎಂದರು.

ಯಾವುದೇ ಕಾರಣಕ್ಕೂ ಚಟಕ್ಕೆ ಬಲಿಯಾಗಬೇಡಿ. ಆಲ್ಕೋಹಾಲಿಕ್, ವರ್ಕೋಹಾಲಿಕ್ ಆಗಬೇಡಿ ಬದಲಾಗಿ ಥಿಂಕೋಹಾಲಿಕ್ ಆಗಿರಿ ಎಂದು ಸಲಹೆ ನೀಡಿದರು.

ನಕ್ಕು ನಗಿಸಿದರು:
ವಿದ್ಯಾರ್ಥಿಗಳಿಗೆ ಎಲ್ಲಿಯೂ ಬೇಸರ ಆಗದಂತೆ ಒಂದೂವರೇ ತಾಸು ಮಾತನಾಡಿದರು. ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವುದು, ಕುತೂಹಲ ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದರು. ಹಾಸ್ಯ ಚಟಾಕಿಗಳನ್ನು ಹಾರಿಸಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net