

ಚಳ್ಳಕೆರೆ: ತಾಲೂಕಿನಲ್ಲಿ 2011ರಲ್ಲಿ 1500 ಎಕರೆ ವ್ಯಾಪ್ತಿಯಲ್ಲಿ ಭಾರತೀಯ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳ (ಐಐಎಸ್ಸಿ) ಸ್ಥಾಪನೆಗೆ ಅಂದು ಸಂಸದರಾಗಿದ್ದ ಜನಾರ್ದನಸ್ವಾಮಿ ಪ್ರಮುಖ ಕಾರಣರಾಗಿದ್ದಾರೆ ಎಂದು ಭಾರತೀಯ ಶಿಕ್ಷಣ ಮಂಡಲ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಂಕರಾನಂದ ಹೇಳಿದರು.
ವಿಜ್ಞಾನ ಸಂಸ್ಥೆಗಳ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿ, ಆಧುನಿಕ ರಾಷ್ಟ್ರೀಯ ಶಿಕ್ಷಣ ಮೌಲ್ಯಗಳು ಮತ್ತು ಶಿಕ್ಷಕರ ತರಬೇತಿಯ ಕುರಿತು ಚರ್ಚೆ ನಡೆಸಿದರು.
ಚಳ್ಳಕೆರೆಯ ಐಐಎಸ್ಸಿ ಘಟಕದ ಮುಖ್ಯಸ್ಥ ಡಾ.ಬಿ.ಎನ್.ರಾವ್ ಮಾತನಾಡಿ, ಚಳ್ಳಕೆರೆ ಭಾಗದಲ್ಲಿ ಸ್ಥಾಪಿತವಾಗಿರುವ ವಿಜ್ಞಾನ ಸಂಸ್ಥೆಗಳಿಂದ ವಿಜ್ಞಾನ ಶಿಕ್ಷಣಕ್ಕೆ ಗ್ರಾಮೀಣ ಮಟ್ಟದಲ್ಲಿ ಅವಕಾಶ ದೊರೆಯುತ್ತಿದೆ. ಬದಲಾಗುತ್ತಿರುವ ಸಮಾಜಕ್ಕೆ ಆಧುನಿಕತೆಯ ಶಿಕ್ಷಣದ ಜಾಗೃತಿಗೆ ಇಂತಹ ಸಂಸ್ಥೆಗಳ ಸ್ಥಾಪನೆ ಅಗತ್ಯ ಎಂದರು.
ಮಾಜಿ ಸಂಸದ ಜನಾರ್ದನಸ್ವಾಮಿ ಮಾತನಾಡಿ, ವಿಜ್ಞಾನ ಸಂಸ್ಥೆಗಳ ಸ್ಥಾಪನೆಯಿಂದ ಚಳ್ಳಕೆರೆ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಒರಿಸ್ಸಾದಿಂದ 300 ಮಂದಿ ಶಿಕ್ಷಕರು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬುದು ಜಿಲ್ಲೆಗೆ ಹೆಮ್ಮೆ ವಿಷಯ ಹೇಳಿದರು.
ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕೂಗು ಸರಿಯಿದೆ. ಆದರೆ, ದೊಡ್ಡ ಸಂಸ್ಥೆಗಳ ಸ್ಥಾಪನೆ ಆರಂಭದಲ್ಲಿ ಸಹಜ. ಕಾಲಕ್ರಮೇಣ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ. ಹತ್ತು ವರ್ಷದ ಬಳಿಕ ಕನಿಷ್ಠ 10 ಸಾವಿರಕ್ಕೂ ಹೆಚ್ಚು ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ. ಈ ದೂರದೃಷಿಯಿಂದಲೇ ಇಂತಹ ಕೇಂದ್ರ ಸ್ಥಾಪನೆಗೆ ನಾನು ಸೇರಿ ಎಲ್ಲರೂ ಆಸಕ್ತಿ ವಹಿಸಿದ್ದು ಎಂದರು.
ಎಲ್ಲಿಯೇ ಸಂಸ್ಥೆಗಳು ಪ್ರಾರಂಭಗೊಂಡರು ಅವುಗಳು ಪ್ರಗತಿಯಲ್ಲಿ ನಿಧಾನಗತಿಯಲ್ಲಿರುತ್ತವೆ. ಆದರೆ, ಇಲ್ಲಿನ ವಿಜ್ಞಾನ ಕೇಂದ್ರ ಏರಮುಖದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಸಂಶೋಧನೆ, ಅಧ್ಯಯ ವಿಷಯದಲ್ಲಿ ಜಗತ್ತು ಚಿತ್ರದುರ್ಗ ಜಿಲ್ಲೆಯತ್ತ ಗಮನಹರಿಸುವ ರೀತಿ ಸಾಧನೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಚಿತ್ರದುರ್ಗದ ಹಿಂದು ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರು, ಎನ್.ಟಿ.ಭರತ್ ಮತ್ತಿತರರು ಇದ್ದರು.