

ಮೈಸೂರು: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಐವರು ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ. ಹಾಗಾದರೆ ಬಿಜೆಪಿ ಮತ್ತು ಜೆಡಿಎಸ್‌ಗೆ ಬೇರೆ ಸಮುದಾಯದವರು ಮತ ನೀಡಲಿಲ್ಲವೇ? 19 ಖಾತೆಗಳನ್ನು ಬ್ರಾಹ್ಮಣ ಸಮುದಾಯಕ್ಕೆ ನೀಡಿದ್ದಾರೆ. ಇತರೆ ಸಣ್ಣಪುಟ್ಟ ಸಮುದಾ ಯಗಳ ಜನರು ನಿಮಗೆ ಮತ ನೀಡಲಿಲ್ಲವೇ? ದೇಶದಲ್ಲಿ ಬಿಜೆಪಿಯಿಂದ ನಿರಂತರ ತಾರತಮ್ಯ ನಡೆಯುತ್ತಿದೆ. ಸಮಾನತೆ ಎನ್ನುವುದು ಕಾಂಗ್ರೆಸ್‌ನಲ್ಲಿ ಮಾತ್ರ ಇರುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕಡೆಗೆ ಗಮನ ಹರಿಸಬೇಕು. ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು, ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡಿಸಬೇಕು, ಬರ ಪರಿಹಾರ ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಮತದಾರರನ್ನು ನಾನು ಸ್ಯಾಡಿಸ್ಟ್ ಎಂದು ಕರೆದಿಲ್ಲ. ನನಗೆ ಮತದಾರರ ಬಗ್ಗೆ ಗೌರವವಿದೆ. ನಾನು ವ್ಯವಸ್ಥೆಯನ್ನಷ್ಟೇ ಟೀಕಿಸಿದ್ದೇನೆ. ಆದರೆ, ಕೆಲವರು ನನ್ನ ಮಾತನ್ನು ತಿರುಚಿ ಮತದಾರರನ್ನು ಅವಮಾನಿಸಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಗ್ಯಾರಂಟಿ ಯೊಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ನಾನು ಹೇಳಿಕೆ ನೀಡಿಲ್ಲ. ಮಾಧ್ಯಮದಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ . 3 ಲಕ್ಷ ಸಂಬಳ ತೆಗೆದುಕೊಳ್ಳುತ್ತಿರುವವರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತಿದ್ದು, ಇಂಥದನ್ನು ಗಮನಿಸಬೇಕು ಎಂದು ಸಲಹೆ ನೀಡಿದ್ದೇನೆ. ಯೋಜನೆಯಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಯೋಜನೆ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡುತ್ತೇನೆ ಎಂದು ನಾನು ಹೇಳಿಕೆ ನೀಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ವಕ್ತಾರ ಕೆ.ಮಹೇಶ್, ಕಾರ್ಯದರ್ಶಿ ಗಿರೀಶ್ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು ಇದ್ದರು.