

ಮಡಿಕೇರಿ:
ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ನಮ್ಮ ಅಭ್ಯರ್ಥಿ ವಿರುದ್ಧವಾಗಿ ಕಣಕ್ಕೆ ಇಳಿದಿದ್ದಾರೆ. ಅವರ ವಿರುದ್ಧ ಇನ್ನು ಏನು ಮಾತಾಡುವುದಕ್ಕೆ ಆಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಗೌಡ ಪ್ರಶ್ನೆ ಮಾಡಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಪ್ರಚಾರಕ್ಕಾಗಿ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಸುದ್ದಿಗಾರರ ಜತೆ ಮಾತನಾಡಿದರು. ಈಶ್ವರಪ್ಪ ಕೋಪ, ತಾಪ ಪ್ರದರ್ಶನ ಮಾಡುತ್ತಿದ್ದಾರೆ. ಅದನ್ನೆಲ್ಲಾ ಈಗ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಪಕ್ಷದ ವಿರುದ್ಧ ಹೋಗಬಾರದಿತ್ತು. ಹೋಗಿದ್ದಾರೆ. ಈಗ ಅವರ ಕೋಪ ತಾಪದ ಮಾತುಗಳನ್ನು ಎದುರಿಸಬೇಕಾಗುತ್ತದೆ. ಆದರೆ ಜನ ನಮ್ಮ ಜತೆ ಇದ್ದಾರೆ. ಹಾಗಾಗಿ ನಾವು ಯಾವುದಕ್ಕೂ ಮಾನ್ಯತೆ ಕೊಡುವುದಿಲ್ಲ. ಜನರೂ ಕೂಡ ಅವರನ್ನು ನಿರ್ಲಕ್ಷಿಸುತ್ತಾರೆ ಎಂದರು.
ಈ ಕ್ಷೇತ್ರದಲ್ಲಿ ಜನತೆ ನಮ್ಮ ಕೈ ಹಿಡಿದಿದ್ದಾರೆ. ಪ್ರತಿ ಬಾರಿಯೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಈ ಬಾರಿಯೂ ಒಳ್ಳೆಯ ವಿದ್ಯಾವಂತ, ಪರಿಸರ ಪರ ಕಾಳಜಿ ಇರುವ ಉತ್ತಮ ಮನೆತನದ ಹಿನ್ನೆಲೆ ಇರುವ ವ್ಯಕ್ತಿ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ. ಎಲ್ಲಾ ಕಡೆಯೂ ಇವರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎನ್ನುವುದು ಜನ ಇಚ್ಛೆ ಆಗಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತ. ಕಾಂಗ್ರೆಸ್‌ಗೆ ಮತ ಕೊಟ್ಟರೆ ಏನೂ ಪ್ರಯೋಜನ ಇಲ್ಲ ಎನ್ನುವ ಮನೋಭಾವ ಜನರಲ್ಲಿದೆ. ಹಾಗಾಗಿ ಕಾಂಗ್ರೆಸ್ ಒಂದು ಪ್ರತಿಸ್ಪರ್ಧಿಯೇ ಅಲ್ಲ ಎಂದು ಹೇಳಿದರು.