

ಮಡಿಕೇರಿ: ಇತ್ತೀಚೆಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಚಿವ ಸಂಪುಟದಲ್ಲಿ ಪರಿಶಿಷ್ಟರಿಗೆ ಸೂಕ್ತ ಸ್ಥಾನ ನೀಡದೆ ಕಡೆಗಣಿಸಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ ೧೭ ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸೇರಿ ೧೯ ಅಭ್ಯರ್ಥಿಗಳು ಎನ್‌ಡಿಎ ಮೈತ್ರಿ ಕೂಟದ ಸಂಸದರಿದ್ದಾರೆ. ಇವರಲ್ಲಿ ಐವರು ಪ್ರಬಲ ಸಮುದಾಯದವರಿಗೆ ಮಾತ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಪರಿಶಿಷ್ಟರನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಕೇವಲ ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ. ಭಾವನಾತ್ಮಕ ವಿಚಾರಗಳ ಮೂಲಕ ಪರಿಶಿಷ್ಟರ ಮತಗಳನ್ನು ಕೂಡ ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪರಿಶಿಷ್ಟರು ಬೆಂಬಲಿಸಿದ ಕಾರಣದಿಂದಾಗಿ ರಾಜ್ಯದಲ್ಲಿ ಬಿಜೆಪಿ ೧೭ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಮತಗಳಿಕೆಗೆ ಮಾತ್ರ ಪರಿಶಿಷ್ಟರನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ನಂತರ ಉನ್ನತ ಸ್ಥಾನಮಾನವನ್ನು ನೀಡದೆ ಕಡೆಗಣಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೇವಲ ಮತ ಗಳಿಕೆಗಾಗಿ ಮಾತ್ರ ಪರಿಶಿಷ್ಟರನ್ನು ಓಲೈಕೆ ಮಾಡಿದರೆ ಸಾಲದು. ಅವರ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ಮಾಡಬೇಕು. ಕಾನೂನು ರಕ್ಷಣೆ ನೀಡಬೇಕು ಮತ್ತು ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಿ ರಾಜಕೀಯ ಶಕ್ತಿ ತುಂಬಬೇಕು ಎಂದು ಒತ್ತಾಯಿಸಿದ್ದಾರೆ.
ಉದ್ಯೋಗಕ್ಕಾಗಿ ಹೋರಾಟ: ವಾರ್ಷಿಕ ೨ ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಸುಳ್ಳಾಗಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕ, ಯುವತಿಯರು ಉದ್ಯೋಗ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಕೊಟ್ಟ ಮಾತಿನಂತೆ ಸರ್ಕಾರ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.