ಐಜಿಬಿಸಿ ಮೈಸೂರು ಚಾಪ್ಟರ್‌ಗೆ ಪದಾಧಿಕಾರಿಗಳ ಅಧಿಕಾರ ಸ್ವೀಕಾರ

25
Published on

ಮೈಸೂರು: ಭಾರತೀಯ ಹಸಿರು ಕಟ್ಟಡಗಳ ಮಂಡಳಿ(ಐಜಿಬಿಸಿ) ಮೈಸೂರು ಚಾಪ್ಟರ್‌ನ ನೂತನ ಅಧ್ಯಕ್ಷರಾಗಿ ವೀನಸ್ ಗ್ಯಾಸ್ ಪ್ರಾಡೆಕ್ಟ್ಸ್ ಮತ್ತು ಸರ್ವೀಸಸ್ ಸಂಸ್ಥೆಯ ವಿನೋದ್ ಮಾರೋಳಿ ಹಾಗೂ ಉಪಾಧ್ಯಕ್ಷರಾಗಿ ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಿ.ಶ್ರೀಹರಿ ಅಧಿಕಾರ ಸ್ವೀಕರಿಸಿದರು.

ವಿಶ್ವೇಶ್ವರನಗರದಲ್ಲಿರುವ ಬಿಎಐ ಎಂಬಿಸಿಟಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐಜಿಬಿಸಿಯ ರಾಷ್ಟ್ರೀಯ ಸಹ ಚೇರ್ಮನ್ ಸಿ.ಶೇಖರ್‌ರೆಡ್ಡಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.

ಹಸಿರು ಭವಿಷ್ಯ ನಿರ್ಮಾಣ: ಪದಗ್ರಹಣ ಮುನ್ನ ಆಯೋಜಿಸಿದ್ದ ಹಸಿರು ಭವಿಷ್ಯ ನಿರ್ಮಾಣ ಕುರಿತ ಸಂವಾದದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ವಿನೋದ್ ಮಾರೋಳಿ, ಇತ್ತೀಚಿನ ದಿನಗಳಲ್ಲಿ ಆಹಾರಕ್ಕಿಂತಲೂ ಹೆಚ್ಚಾಗಿ ಕಾಂಕ್ರೀಟ್ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದರಿಂದಾಗಿ ಪ್ರಕೃತಿ ದಿನದಿಂದ ದಿನಕ್ಕೆ ಹಾಳಾಗುತ್ತಿದ್ದು, ಪರಿಸರ ವೈಪರೀತ್ಯ, ಉಷ್ಣಾಂಶ ಹೆಚ್ಚಳ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉಂಟಾಗಿದೆ. ಈ ಬಗ್ಗೆ ಪ್ರಕೃತಿ ಸಾಕಷ್ಟು ಎಚ್ಚರಿಕೆ ನೀಡುತ್ತಲೇ ಬಂದಿದೆ ಎಂದರು.

ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯದಿಂದ ಮೈಸೂರಿನಲ್ಲೂ ವಾತಾವರಣ ಕಲುಷಿತವಾಗಿದ್ದು, ಪ್ರಸ್ತುತ ಮೈಸೂರಿನ ಜನಸಂಖ್ಯೆ 13.5 ಲಕ್ಷವಿದ್ದು, ಪ್ರತಿನಿತ್ಯ 14 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಆಗುತ್ತಿದೆ. ಪ್ರತಿನಿತ್ಯ 450 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂಬ ಮಾಹಿತಿಗಳನ್ನು ಪ್ರಸ್ತಾಪಿಸಿದರು.

ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಮೈಸೂರು ನಗರವನ್ನು ಹಸಿರು ನಗರವಾಗಿ ರೇಟಿಂಗ್ ಪಡೆಯಲು ಅಗತ್ಯ ಕಾರ್ಯಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ಸಂಘಟನೆಯ ಕೆ.ಶ್ರೀರಾಂ, ಸೌರವ್ ಚೌಧರಿ, ಪ್ರಣತಿ ಶ್ರಾಫ್ ಮುನೋಟ್, ಸಿ.ಶೇಖರ್ ರೆಡ್ಡಿ ಇತರರು ವಿಷಯ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net