

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳುತ್ತಿರುವ ಕಾಮಗಾರಿ ಬಿಲ್‌ಗಳ ಸಲ್ಲಿಕೆ ಹಾಗೂ ಅನುಮೋದನೆಯಲ್ಲಿ ಸರಳೀಕರಣಗೊಳಿಸಿ ಪಾರದರ್ಶಕತೆ ತರಲು ಇನ್ನು ಮುಂದೆ ಬಿಲ್‌ಗಳನ್ನು ಐಎಫ್ಎಂಎಸ್ ತಂತ್ರಾಂಶದಲ್ಲಿ ಪ್ರಕ್ರಿಯೆಗೊಳಿಸಲಾಗುತ್ತಿದೆ.
ಪ್ರಸ್ತುತ ಪಾಲಿಕೆಯಲ್ಲಿ ಬಿಲ್‌ಗಳ ಸಲ್ಲಿಕೆ ಹಾಗೂ ಅನುಮೋದನೆ ಭೌತಿಕ ಕಡತದ ಮೂಲಕ ನಡೆಯುತ್ತಿದೆ. ಇದರಿಂದಾಗಿ ಬಿಲ್ ಪಾವತಿ ವಿಳಂಬವಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ಮನವಿಯಂತೆ ಬಿಲ್ ಪಾವತಿ ವಿಧಾನವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಆಯಾ ಬಿಲ್, ಕಡತಗಳನ್ನು ಇನ್ನು ಮುಂದೆ ಪೂರ್ಣ ಪ್ರಮಾಣದಲ್ಲಿ ಐಎಫ್ಎಂಎಸ್ ತಂತ್ರಾಂಶದಲ್ಲಿ ಅಳವಡಿಸಲಾಗುತ್ತದೆ.
ಐಎಫ್ಎಂಎಸ್ ತಂತ್ರಾಂಶದಲ್ಲಿ ಗುತ್ತಿಗೆದಾರರು ತಮ್ಮ ಲಾಗಿನ್ ಮೂಲಕ ಸೂಕ್ತ ದಾಖಲಾತಿಗಳನ್ನು ದಾಖಲಿಸಬಹದು. ಗುತ್ತಿಗೆದಾರರಿಂದ ಸ್ವಯಂ ದಾಖಲಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡೆಮೋ ವಿಡಿಯೋಗಳನ್ನು ಗುತ್ತಿಗೆದಾರರಿಗೂ ಹಾಗೂ ಅಧಿಕಾರಿಗಳಿಗೆ ಒದಗಿಸಲಾಗುವುದು. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಆನ್‌ಲೈನ್ ತರಬೇತಿ ನೀಡಿದ್ದು, ಸದ್ಯದಲ್ಲೇ ಗುತ್ತಿಗೆದಾರರಿಗೂ ಸಹ ತರಬೇತಿಯನ್ನು ನೀಡಲಾಗುವುದು. ಈ ಸಂಬಂಧ ಬಿಲ್ ಪಾವತಿಯ ಪ್ರಕ್ರಿಯೆ ಕುರಿತು ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ತಿಳಿಸಿದ್ದಾರೆ.