

ಮೈಸೂರು: ನಾವು ಭಾಷೆ, ದೇಶ ಬೆಳೆಸುವುದರಲ್ಲಿ ಹಿಂದಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಾಸ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ರಾಮಕೃಷ್ಣ ವಿದ್ಯಾಕೇಂದ್ರದ ಕಾರ್ಯ ನಿರ್ವಹಣಾಧಿಕಾರಿ ಜಿ.ಚಂದ್ರಶೇಖರ್ ಹೇಳಿದರು.
ನಗರದ ಶ್ರೀ ಪ್ರಣಮ್ಯ ಎಜುಕೇಶನಲ್ ಟ್ರಸ್ಟ್, ಜ್ಯೋತಿ ಪಿಯು ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ತರಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೆ ಭಾರತವನ್ನು ಮುಂದುವರಿಯುತ್ತಿರುವ ರಾಷ್ಟ್ರ ಎನ್ನುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಜಪಾನ್‌ನಂತಹ ಪುಟ್ಟ ರಾಷ್ಟ್ರ ಅಭಿವೃದ್ಧಿಯಲ್ಲಿ ಮುಂದಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಜನರ ಶ್ರಮ. ಅದೇ ಮಾದರಿಯಲ್ಲಿ ನಾವೂ ಶ್ರಮಪಟ್ಟರೆ ಭಾರತ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದರು.
ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು. ಶಾಲಾ ದಿನಗಳಿಂದಲೇ ಭವಿಷ್ಯದೆಡೆಗೆ ನಿಶ್ಚಿತ ಗುರಿಯೊಂದಿಗೆ ಮುನ್ನಡೆಯಬೇಕು. ಬಿಹಾರ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ ಐಎಎಸ್, ಐಪಿಎಸ್ ಅಧಿಕಾರಿಗಳು ಅಲ್ಲಿನವರೇ ಹೆಚ್ಚು. ಹೀಗಾಗಿ ವಿದ್ಯಾರ್ಥಿಗಳು ಏನಾದರೂ ಸಾಧಿಸುವ ಛಲದೊಂದಿಗೆ ಮುನ್ನಡೆಯಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ಮಾತ್ರವಲ್ಲದೆ, ಜೀವನ ಕೌಶಲವನ್ನೂ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಪತ್ರಿಕೋದ್ಯಮಿ ಮಹಿ ಮಹೇಶ್, ಪ್ರತಿಯೊಬ್ಬರೂ ಒಂದಲ್ಲ ಒಂದು ತಪ್ಪು ಮಾಡಿರುತ್ತಾರೆ. ಆದರೆ ಮತ್ತೆ ಅದೇ ತಪ್ಪನ್ನು ಮಾಡಬಾರದು. ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ 5ಡಿ ಫಾರ್ಮುಲಾ ಇಟ್ಟುಕೊಳ್ಳಬೇಕು. ಡಿಸೈರ್, ಡಿಸಿಷನ್ ಮೇಕಿಂಗ್, ಡ್ರೀಮಿಂಗ್, ಡೆಡಿಕೇಷನ್ ಇರಬೇಕು. ನಾನು ಎಲ್ಲವನ್ನೂ ಮಾಡಿದೆ. ಆದರೆ ಡೆಡಿಕೇಷನ್ ಇಲ್ಲದಿದ್ದರಿಂದ ಅಂದುಕೊಂಡಿದ್ದನ್ನು ಸಾಧಿಸಲು ಆಗುವುದಿಲ್ಲ. ಹೀಗಾಗಿ ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ಸಾಧನೆಯ ಶಿಖರವೇರಬೇಕು ಎಂದು ಸಲಹೆ ನೀಡಿದರು.
ಪಾಲಕರು ತಮ್ಮ ಮಕ್ಕಳ ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿರುತ್ತಾರೆ. ಉತ್ತಮವಾಗಿ ಓದಿ ಅವರ ಕನಸನ್ನು ಸಾಕಾರಗೊಳಿಸಬೇಕು. ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆ ನೀಡಬೇಕು. ಹಿರಿಯರನ್ನು ಗೌರವಿಸಿ, ಅಂಗವಿಕಲರಿಗೆ ನೆರವಾಗಿ. ಸಾಧಿಸುವ ಛಲವನ್ನು ಎಂದಿಗೂ ಬಿಡಬೇಡಿ ಎಂದು ಹೇಳಿದರು.
ಜ್ಯೋತಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚನ್ನಬಸಪ್ಪ ಮಾತನಾಡಿ, ಮಕ್ಕಳು ಕಷ್ಟಪಟ್ಟು ಓದಬಾರದು, ಇಷ್ಟಪಟ್ಟು ಓದಬೇಕು. ಆಗಲೇ ಓದು ತಲೆಗೆ ಹತ್ತುವುದು. ಈಗ ನಿಮಗೆ ಸುವರ್ಣಯುಗ, ಓದಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಮುದ್ದುವೀರಪ್ಪ, ಸವಿತಾ, ಮಧುಸೂದನ್, ಪ್ರಾಂಶುಪಾಲ ಭರತ್ ರಾಜ್, ಅರವಿಂದ್ ಸೇರಿದಂತೆ ಇನ್ನಿತರರಿದ್ದರು.