

ಮೈಸೂರು: ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ಪಕ್ಷದ ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ತಮ್ಮ ಆಸೆ ಹೇಳಿಕೊಂಡರೆ ಏನೂ ಪ್ರಯೋಜನ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ವಿಚಾರ ಪರೋಕ್ಷವಾಗಿ ಸಚಿವ ರಾಜಣ್ಣ ವಿರುದ್ಧ ಅಸಮಾಧಾನ ಹೊರ ಹಾಕಿದರು.
ನಿಮ್ಮ(ಮಾಧ್ಯಮದವರು) ಮುಂದೆ ಹೇಳಿಕೊಂಡರೆ ನೀವೇನಾದರೂ ಸ್ಥಾನ ಕೊಡಿಸುತ್ತೀರಾ?
ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚೆ ಮಾಡಬೇಕು. ಮಾಧ್ಯಮದ ಬಳಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿದರೆ ಅದರಿಂದ ಸರ್ಕಾರಕ್ಕೂ ಒಳ್ಳೆಯದು, ಜನರಿಗೂ ಒಳ್ಳೆಯದು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚೆ ಮಾಡಿದರೆ ಅದು ಸರ್ಕಾರಕ್ಕೆ ನಷ್ಟ ಎಂದು ಪ್ರತಿಕ್ರಿಯಿಸಿದರು.
ಉಪಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರೋರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ ಅವರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕೆಂಬ ಸ್ವಾಮೀಜಿ ಹೇಳಿಕೆಗೆ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳು ಯಾವ ವಿಚಾರವನ್ನು ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರ್ಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ?
ಸ್ವಾಮೀಜಿ ತಮ್ಮ ಮಠದಲ್ಲಿ ಆ ವಿಚಾರ ಮಾತಾಡಲಿ. ತಮ್ಮ ಭಕ್ತರ ಮುಂದೆ ಅದನ್ನು ಹೇಳಲಿ. ಯಾರಿಗೆ ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂದು ಹೇಳುವ ಸ್ಥಿತಿ ಬಂದಿರುವುದೇ ಬೇಸರದ ವಿಚಾರ. ಸ್ವಾಮೀಜಿ ಹೇಳಿಕೆಗಳು ಮತ್ತು ಅದರ ಪ್ರತಿ ಹೇಳಿಕೆಗಳು ನನ್ನಲ್ಲಿ ಅನೇಕ ಜಿಜ್ಞಾಸೆ ಮೂಡಿಸಿವೆ ಎಂದರು.