ಪ್ರಮಾಣಪತ್ರ ಬೇಕಂದ್ರೆ ಲಂಚ ಕೊಡಬೇಕಂತೆ !

RON METTING
Published on

ರೋಣ: ಮನೆ ಹಾಗೂ ಅಂಗಡಿಗಳ ಉತಾರ ಹಾಗೂ ಎನ್​ಒಸಿ ಪ್ರಮಾಣಪತ್ರ ಪಡೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ಕೊಡಬೇಕು. ಹಣ ನೀಡಿದರೆ ಮಾತ್ರ ಶೀಘ್ರದಲ್ಲಿ ಕೆಲಸಗಳಾಗುತ್ತವೆ. ಹಣ ನೀಡದವರಿಗೆ ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ ಎಂದು ಸದಸ್ಯ ವಿಜಯ ಗಡಗಿ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಬಡವರು, ನಿರ್ಗತಿಕರು ಮನೆ ಕಟ್ಟಿಸಿಕೊಳ್ಳಲು ಹಾಗೂ ವ್ಯಾಪಾರಸ್ಥರು ಹಲವು ಕೆಲಸಗಳಿಗಾಗಿ ಉತಾರ ಹಾಗೂ ಎನ್​ಒಸಿ ಪ್ರಮಾಣಪತ್ರ ಪಡೆಯಲು ಬಂದರೆ ಅವರಿಂದ 4 ರಿಂದ 5 ಸಾವಿರ ರೂ. ಲಂಚವನ್ನು ಕೇಳಲಾಗುತ್ತಿದೆ. ಬಡವರಿಗೆ ಉತಾರ ನೀಡಿ ಎಂದು ಪಪಂ ಸದಸ್ಯರು ಹೇಳಿದರೂ ಅವರ ಮಾತಿಗೆ ಕಿಮ್ಮತ್ತು ಕೊಡುವುದಿಲ್ಲ. ಹಣ ಕೊಟ್ಟವರಿಗೆ ಮಾತ್ರ ಇಲ್ಲಿ ಕೆಲಸಗಳು ಸಲೀಸಾಗಿ ಆಗುತ್ತವೆ ಎಂದು ಆರೋಪಿಸಿದರು.

ಬೋರ್​ವೆಲ್ ದುರಸ್ತಿಗೆ 9 ಸಾವಿರ ರೂ.ಗಳ ಖರ್ಚು ಹಾಕಲಾಗಿದ್ದು, ಹಣ ದುರುಪಯೋಗವಾಗಿದೆ. 3 ಸಾವಿರ ರೂ.ಗಳಿಂದ 4 ಸಾವಿರ ರೂ. ಗಳ ವರೆಗೂ ಪಂಪ್ ರಿಪೇರಿಗೆ ತಗುಲಲಿದ್ದು, 9 ಸಾವಿರ ರೂ.ಗಳ ಖರ್ಚು ತೋರಿಸಲಾಗಿದೆ. ಇದರಲ್ಲಿ ಹಣ ದುರ್ಬಳಕೆ ಮಾಡಲಾಗಿದೆ. ಅಲ್ಲದೆ, ಬೋರ್​ವೆಲ್​ಗಳು ಕೆಲಸ ನಿಲ್ಲಿಸಿ ಹಲವು ವರ್ಷಗಳಾಗಿವೆ. ಶುದ್ಧ ಕುಡಿಯುವ ನೀರಿನ ಘಟಕಕ್ಕೆ 70 ಸಾವಿರ ಖರ್ಚು ಮಾಡಿದ್ದು, ಟೆಂಡರ್ ನೀಡುವಾಗ ಘಟಕಗಳು ಯಾವ ಸ್ಥಿತಿಯಲ್ಲಿದ್ದವೋ ಅದೇ ಸ್ಥಿತಿಯಲ್ಲಿ ಮರಳಿಸಬೇಕು ಎಂಬ ನಿಯಮವಿದ್ದರೂ ರಿಪೇರಿ ಖರ್ಚನ್ನು ಗುತ್ತಿಗೆದಾರರಿಂದ ಪಡೆಯದೇ ಪುರಸಭೆ ಅನುದಾನದಲ್ಲಿ ಖರ್ಚು ಹಾಕಿದ್ದು ಗುತ್ತಿಗೆದಾರರು ಇಟ್ಟ ಮುಂಗಡ ಹಣ (ಇಎಂಡಿ) ಹಣದಲ್ಲಿ ಮರುಪಾವತಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸದಸ್ಯ ಮಲ್ಲಯ್ಯ ಮಹಾಪುರುಷಮಠ, ಸಂತೋಷ ಕಡಿವಾಲ, ಗದಿಗೆಪ್ಪ ಕಿರೇಸೂರ ಮಾತನಾಡಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯರಾದ ಮಿಥುನ ಜಿ. ಪಾಟೀಲ, ಸಂಗಪ್ಪ ಜಿಡ್ಡಿಬಾಗಿಲ, ಬಾವಾಸಾಬ್ ಬೆಟಗೇರಿ, ದಾವಲಸಾಬ್ ಬಾಡಿನ, ಈಶಪ್ಪ ಕಡಬಿನಕಟ್ಟಿ ಹನಮಂತ ತಳ್ಳಿಕೇರಿ, ವಿದ್ಯಾ ದೊಡ್ಡಮನಿ, ವಿಜಯಲಕ್ಷ್ಮೀ ಕೊಟಗಿ, ರಂಗಮ್ಮ ಭಜಂತ್ರಿ, ಆನಂದ ಚಂಗಳಿ, ಜಗದೀಶ ಹಿರೇಮಠ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net