

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಂತರಂಗ ಹಾಗೂ ಬಹಿರಂಗಗಳಲ್ಲಿ ಸತ್ಯಶುದ್ಧ ಆಚರಣೆ ಇದ್ದಾಗ ದೇವರೆ ನಮ್ಮನ್ನು ಪ್ರೀತಿಸುತ್ತಾನೆ. ನಾವು ಅವನನ್ನು ಪ್ರೀತಿಸುವಂತಾಗದೆ ಅವನೇ ನಮ್ಮನ್ನು ಪ್ರೀತಿಸುವಂತೆ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಚಿತ್ತರಗಿ ವಿಜಯಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸ ನಿಮಿತ್ತ ನಗರದ ಮುರಘಾಮಠದಲ್ಲಿ ಏರ್ಪಡಿಸಿರುವ ಶ್ರೀ ಮದಥಣಿ ಮುರಘೇ೦ದ್ರ ಮಹಾಶಿವಯೋಗಿಗಳ ಜೀವನ ಮತ್ತು ಸಾಹಿತ್ಯ ಪ್ರವಚನ ಹಾಗೂ ಗ್ರಂಥ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ, ವಚನ ಗಾಯನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರಾವಣ ಮಾಸದಲ್ಲಿ ಮಳೆ, ಚಳಿ ಜಾಸ್ತಿ ಇರುವುದರಿಂದ ಜನರು ನಿತ್ಯದ ಬದುಕಿನ ಕಾಯಕ ಮುಗಿಸಿ ಸಂಜೆ ಹೊತ್ತಿಗೆ ಮನೆ ಸೇರುತ್ತಿದ್ದರು. ಹಿಂದಿನ ಕಾಲದಲ್ಲಿ ಸಂಜೆ ಸಮಯ ವ್ಯರ್ಥ ಮಾಡುವ ಬದಲು ಪವಿತ್ರ ಶ್ರಾವಣ ಮಾಸದಲ್ಲಿ ಹಿತನುಡಿ, ಅನುಭಾವ, ಪ್ರವಚನ ಕೇಳಿ ತಮ್ಮ ಬದುಕನ್ನು ಸನ್ಮಾರ್ಗದತ್ತ ಸಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಇದರಿಂದ ಧರ್ಮ, ಸಂಸ್ಕೃತಿ, ವೈಚಾರಿಕತೆ ನಮ್ಮಲ್ಲಿ ಬೆಳೆದು ದೇವರು, ದಯೆ, ಭಕ್ತಿ, ಗುರುವಿನ ಮಾರ್ಗದರ್ಶನ ಸಿಗುತ್ತಿತ್ತು ಎಂದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಬದುಕಿಗೆ ನಾವು ಒಳ್ಳೆಯವರಾಗಬೇಕು. ಆಗ ಮಾತ್ರ ಮನುಷ್ಯನ ಭವಿಷ್ಯ ಪ್ರಜ್ವಲಿಸುತ್ತದೆ ಎಂಬುದನ್ನು ಅರಿತುಕೊಳ್ಳುವುದು ಈ ಪ್ರವಚನದ ಉದ್ದೇಶ. ಮಹಾತ್ಮರ, ಶರಣರ ಜೀವನ ದರ್ಶನ ನಮಗೆ ಲಭ್ಯವಾದರೆ ನಾವು ಮಹಾತ್ಮರ ಮಾರ್ಗದಲ್ಲಿ ಸಾಗಬಹುದು ಎಂದರು.
ಸದಾಶಿವ ಐಹೊಳೆ ವಚನ ಗಾಯನ ಪ್ರಸ್ತುತಪಡಿಸಿದರು. ಶ್ರೀ ಗದಗಯ್ಯ ದೇವರು, ಡಾ. ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರದೀಪ ಪಾಟೀಲ, ರಾಜಶೇಖರ ಕಮತಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಇತರರು ಇದ್ದರು.