ಬಾಗಿ ನಡೆದರೆ ಭಗವಂತ, ಇಲ್ಲದಿದ್ದರೆ ದುರಂತ

HBV DHARMA SAMARAMBA
Published on

ಹಂಸಭಾವಿ: ದೀಪ ಹಚ್ಚುವುದರಿಂದ ಬಹಿರಂಗದ ಕತ್ತಲು ದೂರವಾದರೆ ಜ್ಞಾನದ ದೀಪ ಹಚ್ಚುವುದರಿಂದ ಮನುಷ್ಯನ ಅಂತರಂಗದ ಕತ್ತಲು ಕಳೆಯುತ್ತದೆ ಎಂದು ರಾಣೆಬೆನ್ನೂರಿನ ಶನೈಶ್ಚರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರು ನುಡಿದರು.

ಸ್ಥಳೀಯ ಪವಾಡ ಸನ್ನಿಧಿ ಶ್ರೀ ಹೊಳಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ, ಜನಜಾಗೃತಿ ಧರ್ಮ ಸಮಾರಂಭ ಹಾಗೂ ನೃತ್ಯ-ಸಂಗೀತ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಾಗಿದವನು ಭಗವಂತನ ಹತ್ತಿರ ಹೋದರೆ, ಬಾಗದವನು ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ ಎಂದರು.

ನಿರೂಪಕಿ ಭಾವನಾ ಗೌಡ್ರ ಮಾತನಾಡಿ, ಮನುಷ್ಯ ಆಧುನಿಕ ಭರಾಟೆಯಲ್ಲಿ ಸಿಲುಕಿ ದೇಶ, ಭಾಷೆ, ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾನೆ. ನಾವು ಮಾಡುವ ಕೆಲಸ ಹೊಟ್ಟೆ ತುಂಬಿಸುವ ಜತೆಗೆ ಸಮಾಜದ ಶೈಕ್ಷಣಿಕ, ಧಾರ್ವಿುಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡುವಂತಿರಬೇಕು. ಭವ್ಯ ಭಾರತದ ಭವಿಷ್ಯಕ್ಕೆ ಯುವಜನತೆ ಮುಂದೆ ಬರಬೇಕು. ಮಕ್ಕಳ ಬೆಳವಣಿಗೆಯಲ್ಲಿ ತಂದೆ-ತಾಯಿಯರ ಪಾತ್ರ ಮಹತ್ವದ್ದಾಗಿದೆ. ಮಕ್ಕಳೂ ತಂದೆ-ತಾಯಿಯರಿಗೆ ಗೌರವ ನೀಡಬೇಕು ಎಂದರು.

ಶಿವಯೋಗೀಶ್ವರ ಆಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಕೊಣಂದೂರಿನ ಶಿವಲಿಂಗೇಶ್ವರ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಗ್ರಾಪಂ ಅಧ್ಯಕ್ಷ ರಾಜಶೇಖರ ಹುಚಗೊಂಡ್ರ ಕಾರ್ಯಕ್ರಮ ಉದ್ಘಾಟಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮಲ್ಲಜ್ಜೇರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೋಹನಗೌಡ ಪಾಟೀಲ ಮಾತನಾಡಿದರು. ಹೊಳಬಸವೇಶ್ವರ ಕಾರ್ತಿಕ ದೀಪೋತ್ಸವ ಹಾಗೂ ಹೊಳಬಸವೇಶ್ವರ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಶಿವಯೋಗಿ ಹುಚಗೊಂಡ್ರ, ಜಯಪ್ಪ ಬಂಡೇರ, ಶಿವಯೋಗಿ ಹುಚಗೊಂಡ್ರ, ರೇಖಾ ಪಾಟೀಲ, ಇತರರು ಉಪಸ್ಥಿತರಿದ್ದರು.

ಸ್ಪೂರ್ತಿ ಚಪ್ಪರದಹಳ್ಳಿಮಠ, ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಹಾಗೂ ಸೋಮಶೇಖರ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ನೃತ್ಯ-ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net