ಸೃಜನಾತ್ಮಕವಾಗಿ ಯೋಚಿಸಿದಲ್ಲಿ ಕತೆಗಾರರಾಗಬಹುದು

mysore
Published on

ಮೈಸೂರು: ವಿದ್ಯಾರ್ಥಿ ಜೀವನದಲ್ಲೇ ಸೃಜನಾತ್ಮಕವಾಗಿ ಯೋಚನೆ ಮಾಡಿದರೆ ಕತೆಗಾರರು, ಕವಿಗಳು, ಸಿನಿಮಾ ನಿರ್ದೇಶಕರಾಗಬಹುದು ಎಂದು ಮೈಸೂರು ಆಕಾಶವಾಣಿ ಸಹಾಯಕ ಕಾರ್ಯಕ್ರಮ ನಿರ್ವಾಹಕ ನಿರ್ದೇಶಕ ಅಬ್ದುಲ್ ರಷೀದ್ ಹೇಳಿದರು.


ವಿ.ವಿ.ಮೊಹಲ್ಲಾದ ಮಾತೃಮಂಡಲಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕವನ-ಕಥೆ ಬರೆಯುವ, ನಟನೆಯ ಕೌಶಲ ಪ್ರತಿಯೊಬ್ಬರೊಳಗೂ ಅಡಗಿರುತ್ತದೆ. ಗುರುಗಳು ನಮ್ಮೊಳಗಿನ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಬೇಕು. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತರೆ ನಾಟಕ, ಸಿನಿಮಾ ಯಾವುದೇ ಕ್ಷೇತ್ರದಲ್ಲೂ ಗುರಿ ಸಾಧಿಸಿ ಅಭಿಮಾನಿಗಳನ್ನು ಸಂಪಾದಿಸಬಹುದು ಎಂದರು.


ಆಧುನಿಕ ಕಾಲದಲ್ಲಿ ಬಹಳಷ್ಟು ಯುವ ಜನರು ಯುಟ್ಯೂಬರ್‌ಗಳಾಗಿ ಮತ್ತು ಬ್ಲಾಗರ್‌ಗಳು ಹಣ ಸಂಪಾದನೆ ಮಾಡುತ್ತಿದ್ದಾರೆ. ನಿಮ್ಮ ವಿಡಿಯೋಗಳಿಗೆ ಹೆಚ್ಚಿನ ವೀಕ್ಷಕರು ಲಭ್ಯವಾದರೆ ಸ್ವಲ್ಪ ಹಣವನ್ನು ತನ್ನಿಂದ ತಾನೇ ಬರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಸದ್ಬಳಕೆ ಮಾಡಿಕೊಂಡರೆ ಸ್ವಾವಲಂಬನೆ ಸಾಧಿಸಬಹುದು ಎಂದರು.


ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸೆಲ್ಫಿ ಹಾಕಬಹುದು? ನಮ್ಮ ಮೂತಿಯನ್ನು ಎಷ್ಟು ಜನರು ನೋಡುತ್ತಾರೆ. ಇವರಿಗೆ ಬೇರೆ ಕೆಲಸ ಇಲ್ಲವೆಂದು ಟ್ರೋಲ್‌ಗೆ ಒಳಗಾಗಬೇಕಾಗುತ್ತದೆ. ಅದರ ಬದಲು ರಚನಾತ್ಮಕ ಕೆಲಸಕ್ಕೆ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು
ನಿಮ್ಮ ಊರಿನ ಬೆಟ್ಟಗುಡ್ಡ, ಪರ್ವತ, ದೇವಸ್ಥಾನ, ಮಸೀದಿ, ಚರ್ಚುಗಳ ಹಿರಿಮೆಗಳು, ಜೋಗತಿ ಹಾಡು, ದಾಸರ ಪದ, ಮಲೆ ಮಹದೇಶ್ವರರ ಕತೆಗಳು, ಔಷಧೀಯ ಗುಣವಿರುವ ಸಸ್ಯಗಳ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೌಡ್ ಮಾಡಿ ವೀಕ್ಷಕರನ್ನು ಸೆಳೆಯಬೇಕು. ಇದು ಹೆಸರು, ಹಣವನ್ನು ತಂದುಕೊಡುತ್ತದೆ ಎಂದರು.


ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಕ್ಕಳಿಂದಲೇ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ದೇವನೂರ ಮಹದೇವ, ಯು.ಆರ್.ಅನಂತಮೂರ್ತಿ ಹಳ್ಳಿಗಳಿಂದಲೇ ಬಂದು ಕಲಿತು ಸಾಧನೆ ಮಾಡಿದವರು. ಗ್ರಾಮೀಣ ಪ್ರದೇಶದ ವ್ಯಕ್ತಿಯ ಮನಸ್ಸು ಸೂಕ್ಷ್ಮವಾಗಿರುತ್ತದೆ. ತನ್ನ ಹಳ್ಳಿಯಲ್ಲೇ ನಿಂತು ಲೋಕದ ಆಗು-ಹೋಗುಗಳನ್ನು ಗ್ರಹಿಸುತ್ತಾರೆ. ಅದೇ ನಗರ ಪ್ರದೇಶ ವ್ಯಕ್ತಿಯೂ ಒಣ ಮನಸ್ಸಿನವರಾಗಿರುತ್ತಾನೆ. ಹಳ್ಳಿ ಜನ ಜೀವಂತವಾಗಿ ಬದುಕಿರುತ್ತಾರೆ ಎಂದರು.


ಮಾತೃ ಮಂಡಲಿ ವಿದ್ಯಾಸಂಸ್ಥೆ ಗೌರವ ಅಧ್ಯಕ್ಷೆ ವಿಜಯಲಕ್ಷ್ಮೀ ಅರಸ್, ಗೌರವ ಕಾರ್ಯದರ್ಶಿ ವಾಣಿ ಪ್ರಸಾದ್, ಗೌರವ ಸಹ ಕಾರ್ಯದರ್ಶಿ ಹೇಮಾ ಬಾಲಚಂದ್ರನ್, ಖಜಾಂಚಿ ವಿಜಯಲಕ್ಷ್ಮೀ ಮುರಳೀಧರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net